

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರ ಕೊಲೆ ಪ್ರಕರಣ ಸಂಬಂಧ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಬಂಧಿಸಲಾಗಿದ್ದು, ಸದ್ಯ ಜೈಲು ಪಾಲಾಗಿದ್ದಾರೆ.
2016ರ ಜೂನ್ 15ರಲ್ಲಿ ತನ್ನದೇ ಮಾಲೀಕತ್ವದ ಉದಯ್ ಜಿಮ್ನಲ್ಲಿ ಯೋಗೀಶ್ ಗೌಡ ಬರ್ಬರವಾಗಿ ಹತ್ಯೆಯಾಗಿದ್ದರು. ಈ ಸಂಬಂಧ ಸಿಬಿಐ ವಿಚಾರಣೆ ಕೈಗೆತ್ತಿಕೊಂಡಿದೆ. ಕೊಲೆ ಕೇಸ್ನಲ್ಲಿ ವಿನಯ್ ಕುಲಕರ್ಣಿ ಕೈವಾಡವಿರುವ ಮತ್ತು ಪ್ರಭಾವ ಬಳಸಿ ಕೇಸು ಮುಚ್ಚಿ ಹಾಕಿರುವ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಧಾರವಾಡ ಕಲ್ಯಾಣ ನಗರದ ಮನೆ ಮೇಲೆ ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿಯನ್ನು ವಶಕ್ಕೆ ಪಡೆದರು. ಸಂಜೆವರೆಗೂ ವಿಚಾರಣೆ ನಡೆಸಿದ ಅಧಿಕಾರಿಗಳು ಬಳಿಕ 2ನೇ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ವಿನಯ್ ಕುಲಕರ್ಣಿಯನ್ನು ಬಿಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಕೋರ್ಟ್ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಪ್ರಧಾನ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಪಂಚಾಕ್ಷರಿ, ಆರೋಪಿ ವಿನಯ್ ಕುಲಕರ್ಣಿಯನ್ನು ಶುಕ್ರವಾರ ಸಂಜೆವರೆಗೂ(24 ತಾಸು) ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ವಿನಯ್ ಕುಲಕರ್ಣಿಯ ಕರೊನಾ ಟೆಸ್ಟ್ನ ವರದಿ ನೆಗೆಟಿವ್ ಬಂದಿದೆ. ಬೆಳಗಾವಿಯ ಹಿಂಡಲಗಾ ಜೈಲಿಗೆ ವಿನಯ್ ಕುಲಕರ್ಣಿಯನ್ನು ರವಾನಿಸಲಾಗಿದೆ.