ಕುರಿಗಳ ಪ್ರಾಣ ಉಳಿಸಲು ಜೀವ ಕಳೆದುಕೊಂಡ ಕುರಿಗಾಯಿ: ರೈಲಿನಡಿಗೆ ಸಿಲುಕಿ ದಾರುಣ ಸಾವು

death
Published on

ವಿಜಯನಗರ: ತಾನು ಮೇಯಿಸುತ್ತಿರುವ ಕುರಿಗಳ ಪ್ರಾಣ ಉಳಿಸಲು ಹೋಗಿ ಕುರಿಗಾಯಿಯೊಬ್ಬ ಜೀವ ಕಳೆದುಕೊಂಡಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಮತ್ತಿಹಳ್ಳಿ ಬಳಿ ನಡೆದಿದೆ.

ರೈಲ್ವೆ ಹಳಿ ದಾಟುವಾಗ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ 18 ಕುರಿಗಳೂ ಮೃತಪಟ್ಟಿದ್ದು, ಕುರಿಗಾಹಿ ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾನೆ.

ಮೃತ ಕುರಿಗಾಯಿಯನ್ನು ಹರಾಳು ಗ್ರಾಮದ ಚೌಟ್ಗಿ ಕೊಟ್ರೇಶ(23) ಎಂದು ಗುರುತಿಸಲಾಗಿದೆ. ಕೊಟ್ಟೂರು ಪಟ್ಟಣದಿಂದ ಗೂಡ್ಸ್ ರೈಲು ಹರಪನಹಳ್ಳಿ ಮಾರ್ಗವಾಗಿ ಚಲಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ರೈಲು ಹಳಿಯ ಮೇಲೆ ಕುರಿಗಳ ಹಿಂಡು ಹೊರಟಿತ್ತು. ಹಳಿ ದಾಟುವ ಸಮಯದಲ್ಲಿ ಗೂಡ್ಸ್‌ ರೈಲು ಬಂದಿದೆ. ಈ ವೇಳೆ ಕುರಿಗಳು ಹಳಿಗಳ ನಡುವೆ ಇದ್ದವು. ಅವುಗಳು ಸಾಯುವುದನ್ನು ತಪ್ಪಿಸಲು ಕೊಟ್ರೇಶ್‌ ಲಗುಬಗೆಯಿಂದ ಹಳಿಗಳ ಮೇಲೆ ಹೋಗಿ ಕುರಿಗಳನ್ನು ಓಡಿಸಲು ಪ್ರಯತ್ನಿಸಿದ್ದಾನೆ. ಅಷ್ಟರಲ್ಲಿಯೇ ರೈಲು ಕೊಟ್ರೇಶನ ಮೇಲೂ ಹರಿದಿದೆ.

ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net