‘ನೀವು ಮೂರನೇ ಕಣ್ಣು ಬಿಟ್ರೆ ಭಸ್ಮವಾಗ್ತೇನೆ: ನಮ್‌ ದೇವ್ರು ನೀವೇ... ಎಲ್ಲವೂ ನಿಮ್ಮಿಂದ್ಲೇ...’

yogeshwara
Published on

ಬೆಂಗಳೂರು: ಸಚಿವ ಸಿ.ಪಿ.ಯೋಗೇಶ್ವರ ಹಾಗೂ ಶಾಸಕ ರೇಣುಕಾಚಾರ್ಯ ಅವರ ನಡುವಿನ ವಾಕ್ಸಸಮರ ಮುಂದುವರೆದಿದೆ. ರೇಣುಕಾಚಾರ್ಯ ಅವರಿಗೆ ಬೆಂಗಳೂರಿನಲ್ಲಿ ಐಷಾರಾಮಿ ಮನೆ ಸಿಕ್ಕಿರುವುದರ ಹಿಂದೆ ನನ್ನ ಶ್ರಮವಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್ ಸಿ. ಪಿ. ಯೋಗೇಶ್ವರ್ ಟಾಂಗ್ ಕೊಟ್ಟ ಬೆನ್ನಲ್ಲೇ ಇದೀಗ ಅವರ ಹೆಸರು ಉಲ್ಲೇಖಿಸದೇ ಇದೀಗ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಆ ಪುಣ್ಯಾತ್ಮ ನನ್ನ ಜಗದ್ಗುರು ಇದ್ದಹಾಗೆ. ಅವರಿಂದಲೇ ನಮ್ಮ ಕ್ಷೇತ್ರದ ಅಭಿವೃದ್ಧಿಯಾಗಿದೆ. ನಾನು ಶಾಸಕನಾಗಿರುವುದು ಅವರಿಂದಲೇ, ಹಿಂದೆ ಅಬಕಾರಿ ಸಚಿವನಾಗಿದ್ದು ಅವರ ಕೃಪೆಯಿಂದಲೇ, ಎಲ್ಲವೂ ಅವರೇ, ಅಷ್ಟೇ ಅಲ್ಲ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ ಅಂದರೆ ಅದಕ್ಕೂ ಅವರೇ ಕಾರಣ, ಅವರು ಜಗದ್ಗುರು ಇದ್ದಹಾಗೆ. ಪಕ್ಷ ಕಟ್ಟುವಲ್ಲಿ ಅವರ ಪಾತ್ರ ಬಹಳಷ್ಟು ದೊಡ್ಡದಿದೆ. ಹೀಗಾಗಿ ಅವರು ತುಂಬಾ ದೊಡ್ಡವರು ಎಂದು ಟೀಕಿಸುವಂತೆ ನುಡಿದರು.

ಅಷ್ಟೇ ಅಲ್ಲದೇ, ನಾನೇನು ಅವರ ಟೀಕೆ ಮಾಡುತ್ತಿಲ್ಲ. ಅವರ ಮೇಲೆ ಟೀಕೆ ಮಾಡಿದರೆ ಅವರ ಮೂರನೇ ದೃಷ್ಟಿ ನನ್ನ ಮೇಲೆ ಬೀಳುತ್ತದೆ. ಅವರ ಮೂರನೇ ಕಣ್ಣು ಬಿಟ್ಟರೆ ನಾನು ಭಸ್ಮವಾಗಿ ಬಿಡುತ್ತೇನೆ. ಅವರ ಆಶೀರ್ವಾದದಿಂದ ನಾನು ಕಾರಿನಲ್ಲಿ ಓಡಾಡುತ್ತಿದ್ದೇನೆ. ಅವರನ್ನು ನಾನು ಪರಮಾತ್ಮ ಸ್ಥಾನದಿಂದ ನೋಡುತ್ತಿದ್ದೇನೆ. ಹೀಗಾಗಿ ಅವರ ಕೆಂಗಣ್ಣಿಗೆ ಗುರಿಯಾಗಲು ನಾನು ಇಷ್ಟಪಡುವುದಿಲ್ಲ ಎಂದು ಹಾಸ್ಯದ ರೂಪದಲ್ಲಿ ಟಾಂಗ್‌ ನೀಡಿದರು.

ಚುನಾವಣಾ ಬಂದಾಗ ರಾಜಕಾರಣ ಮಾಡೋದು ಸಹಜ. ಆದರೆ ನಮ್ಮಲ್ಲಿ ನಾವೇ ಪ್ರತಿಪಕ್ಷಗಳಾಗಿಬಿಟ್ಟಿದ್ದೇವೆ. ಇದರ ಬಗ್ಗೆ ನನಗೆ ಸಾಕಷ್ಟು ನೋವಾಗಿದೆ. ಮುಂದೆ ಸಹ ಅವರ ಆಶೀರ್ವಾದ ನಮ್ಮ ಮೇಲೆ ಇರಲಿ. ಆದರೆ ಅವರಿಗೆ ಒಂದೇ ಒಂದು ಮಾತನ್ನು ಹೇಳಲು ಇಷ್ಟಪಡುತ್ತೇನೆ. ನಾವು ನಿಮ್ಮನ್ನು ಗುರುಗಳು ಅಂತ ಒಪ್ಪಿಕೊಳ್ಳುತ್ತೇವೆ, ಆದರೆ ಚನ್ನಪಟ್ಟಣದಲ್ಲಿ ಯಾಕೆ ಜನ ತಿರಸ್ಕರಿಸಿದರು? ಇದರ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net