

ಬೆಂಗಳೂರು: ಜೂನ್ ಮಧ್ಯಭಾಗದಲ್ಲಿ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶವನ್ನು ನಾಳೆ (ಜುಲೈ 30) ಪ್ರಕಟಿಸಲಾಗುವುದು. ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದುಕೊಳ್ಳಲು ನಡೆದಿದ್ದ ಸಿಇಟಿ ಪರೀಕ್ಷೆಯನ್ನು ಈ ಬಾರಿ ಬಿಗಿ ಭದ್ರತೆ ನಡುವೆ ಕಟ್ಟುನಿಟ್ಟಾಗಿ ನಡೆಸಲಾಗಿದ್ದು, ಅದರ ಫಲಿತಾಂಶ ನಾಳೆ ಪ್ರಕಟವಾಗಲಿದೆ.
ಈಗಾಗಲೇ ಪಿಯುಸಿ ಅಥವಾ ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿದೆ. ಈ ಎಲ್ಲ ಅಂಕಗಳ ಆಧಾರದಲ್ಲಿ ಅಂತಿಮ ರ‍್ಯಾಂಕ್ ಪಟ್ಟಿಯನ್ನು ಸಿದ್ಧಪಡಿಸಿ ನಾಳೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತಿದೆ ಎಂದು ಪರೀಕ್ಷಾ ಪ್ರಾಧಿಕಾರ ಹೇಳಿದೆ.
ಫಲಿತಾಂಶವನ್ನು ಸಿಇಟಿಯ ಅಧಿಕೃತ ವೆಬ್ಸೈಟ್ http://kea.kar.nic.in ನಲ್ಲಿ ಪರಿಶೀಲಿಸಬಹುದು. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಈ ವೆಬ್ಸೈಟ್ಗೆ ಅದನ್ನು ಅಪ್ಲೋಡ್ ಮಾಡಲಾಗುತ್ತದೆ. ಈ ಲಿಂಕ್ ಕ್ಲಿಕ್ ಮಾಡಿ ಹೋಮ್ ಪೇಜ್ಗೆ ಹೋಗಿ ಅಲ್ಲಿ ತಿಳಿಸಿರುವ ಸೂಚನೆಯಂತೆ ಮಾಹಿತಿಗಳನ್ನು ತುಂಬಿ, ಫಲಿತಾಂಶವನ್ನು ನೋಡಬಹುದಾಗಿದೆ.
ಸಿಇಟಿಯ ತಾತ್ಕಾಲಿಕ ಉತ್ತರ ಕೀಯನ್ನು ಜೂನ್ 22 ರಂದೇ ಬಿಡುಗಡೆ ಮಾಡಲಾಗಿದೆ. KCET ಪರೀಕ್ಷೆಯನ್ನು ಜೂನ್ 16 ಮತ್ತು ಜೂನ್ 17 ರಂದು ರಾಜ್ಯಾದ್ಯಂತ ನಡೆಸಲಾಯಿತು. 2.2 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಕೆಸಿಇಟಿ 2022 ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ.