

ಬೆಂಗಳೂರು: ಹಿಂದು ಧರ್ಮ ಹಾಗೂ ರಾಮನ ವಿರುದ್ಧ ಅವಹೇಳನ ಮಾಡುವಂಥ ಹೇಳಿಕೆ ನೀಡಿದ್ದರಿಂದ ವಕೀಲೆ ಮೀರಾ ರಾಘವೇಂದ್ರ ಅವರಿಂದ ಮುಖಕ್ಕೆ ಮಸಿ ಬಳಿಸಿಕೊಂಡಿರುವ ಸಾಹಿತಿ ಭಗವಾನ್ ಇದೀಗ ಗಂಭೀರ ಆರೋಪ ಮಾಡಿದ್ದಾರೆ. ಗೌರಿ ಲಂಕೇಶ್ ಹಾಗೂ ಸಾಹಿತಿ ಕಲ್ಬುರ್ಗಿಯಂತೆಯೇ ನನ್ನ ಹತ್ಯೆಯನ್ನು ಮಾಡುವುದಾಗಿ ಮೀರಾ ಹೇಳಿದ್ದಾರೆ ಎಂದು ದೂರಿನಲ್ಲಿ ಭಗವಾನ್ ಉಲ್ಲೇಖಿಸಿದ್ದಾರೆ.
ಹಿಂದು ಧರ್ಮ ಧರ್ಮವೇ ಅಲ್ಲ. ಹಿಂದು ಎಂಬ ಶಬ್ದ ಅವಮಾನಕರ ಎಂಬ ಹೇಳಿಕೆ ನೀಡಿದ್ದರು ಭಗವಾನ್. ಹಿಂದು ಧರ್ಮ ಎಂದರೆ ಬ್ರಾಹ್ಮಣ ಎಂದರ್ಥ. ಗ್ರಾಮೀಣ ಜನರಿಗೆ ಹಿಂದು ಎಂದರೆ ಗೊತ್ತೇ ಇಲ್ಲ. ನೀವು ಯಾವ ಧರ್ಮ ಎಂದರೆ ಒಕ್ಕಲಿಗ, ಕುರುಬ ಅಂತ ಜಾತಿಗಳ ಹೆಸರನ್ನಷ್ಟೇ ಹೇಳುತ್ತಾರೆ. ಹಿಂದು ಪದವನ್ನೇ ತೆಗೆದು ಹಾಕಬೇಕು. ನಿಮಗೆ ಮಾನ ಮರ್ಯಾದೆ ಇದ್ದರೆ ಆ ಪದ ತೆಗೆದು ಹಾಕಿ ಎಂದು ಭಗವಾನ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮೀರಾ ಅವರು ದೂರು ದಾಖಲು ಮಾಡಿದ್ದರು.
ಇದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕಳೆದ ವಾರ ಭಗವಾನ್ ಹಾಗೂ ಮೀರಾ ಹಾಜರಾಗಿದ್ದರು. ಭಗವಾನ್ ಅವರ ಹೇಳಿಕೆಯನ್ನು ಕೇಳಿ ಆಕ್ರೋಶಗೊಂಡಿದ್ದ ಮೀರಾ ಅವರ ಮುಖಕ್ಕೆ ಕೋರ್ಟ್ ಆವರಣದಲ್ಲಿಯೇ ಮಸಿ ಬಳಿದಿದ್ದರು.
ಇದಕ್ಕೆ ಸಂಬಂಧಿಸಿದಂತೆ ಮೀರಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅದರಲ್ಲಿ ಇರುವ ಅಂಶ ಹೀಗಿದೆ: ಮೀರಾ ರಾಘವೇಂದ್ರ ಏಕಾಏಕಿ ತಮ್ಮನ್ನು ಅಡ್ಡಗಟ್ಟಿ ತಮ್ಮ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿ ಮುಖಕ್ಕೆ ಮಸಿಬಳಿದು ಅವಾಚ್ಯ ಶಬ್ದಗಳಿಂದ ನಿಂತಿಸಿದ್ದಾರೆ. ನಿನ್ನನ್ನು ಇಷ್ಟಕ್ಕೇ ಸುಮ್ಮನೇ ಬಿಡುವುದಿಲ್ಲ. ಕೊಲೆ ಮಾಡುತ್ತೇನೆ ಎಂದು ಕೂಗಾಡಿದ್ದಾರೆ. ಸುಮ್ಮನೇ ಮಸಿ ಬಳಿದು ಬಿಡುವುದಿಲ್ಲ. ನಿನ್ನ ಸ್ನೇಹಿತರಾದ ಗೌರಿ ಹಾಗೂ ಕಲ್ಬುರ್ಗಿ ಅವರ ಜತೆಗೆ ನಿನ್ನನ್ನೂ ಕಳಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಮೀರಾ ರಾಘವೇಂದ್ರ ಹಾಗೂ ಮಸಿ ಬಳಿಯುತ್ತಿದ್ದ ವಿಡಿಯೋ ಮಾಡುತ್ತಿದ್ದ ಅವರ ಪತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಎಫ್ಐಆರ್ನಲ್ಲಿ ದಾಖಲು ಮಾಡಲಾಗಿದೆ.