

ಬೆಂಗಳೂರು: ಪಾಪ, ಸಿದ್ದರಾಮಯ್ಯ ಅವರಿಗೆ ತಮ್ಮ ಆಡಳಿತಾವಧಿಯಲ್ಲಿ ಮೇಟಿ ಪ್ರಕರಣವನ್ನು ಮುಚ್ಚಿ ಹಾಕಿಸಿದ್ದು ಮರೆತು ಹೋಗಿದೆ. ಹೀಗಾಗಿ ಸಾಮಾನ್ಯ ಕುಟುಂಬದ ಯುವತಿಯನ್ನು ಪೊಲೀಸರಿಗೆ ಪತ್ತೆಹಚ್ಚಲಾಗಿಲ್ಲ. ಆಕೆ ಏನು ನೀರವ್ ಮೋದಿನಾ ? ವಿಜಯಮಲ್ಯನಾ ? ಅಂತ ಈಗ ಕೇಳ್ತಾ ಇದ್ದಾರೆ ?
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ ಪರಿಯಿದು.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಆಡಳಿದ ಅವಧಿಯಲ್ಲಿ ನೊಂದ ಮಹಿಳೆ ದೂರು ಕೊಟ್ಟಾಗ ಮೇಟಿ ವಿರುದ್ಧ ಪ್ರಕರಣ ದಾಖಲಿಸಲಿಲ್ಲ. ಬದಲಿಗೆ ವಿಚಾರಣೆ ನಡೆಸಿ ಕ್ಲೀನ್ ಚಿಟ್ ಕೊಟ್ಟ ನಂತರ ಸಿಐಡಿ ತನಿಖೆ ಅಂತ್ಹೇಳಿ ಪ್ರಕರಣವನ್ನು ಮುಚ್ಚಿ ಹಾಕಿಸಿದರು.
ನಾವಂತೂ ಅಂತಹ ಕೆಲಸ ಮಾಡಿಲ್ಲ. ಪೊಲೀಸರ ನೈತಿಕತೆ ಕುಸಿಯುವಂತಹ ಕೆಲಸ ಯಾರೂ ಮಾಡಬಾರದು. ಯುವತಿ ಪರವಾಗಿ ವಕೀಲ ದೂರು ಕೊಟ್ಟ ತಕ್ಷಣವೇ ಇವರು ( ಪ್ರತಿಪಕ್ಷಗಳು) ಕೂಗಿ ಕೂಗಿ ಹೇಳಿದರಲ್ಲ, ಅದೇ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಎಸ್ ಐಟಿಯವರಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಸತ್ಯಾಂಶ ಪತ್ತೆ ಹಚ್ವುವುದರ ಜತೆಗೆ ಯುವತಿಯ ಶೋಧ ನಡೆಸಿದ್ದು, ಅವರದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಅವರ ಪಾಡಿಗೆ ಅವರನ್ನು ಬಿಡುವುದು ಲೇಸು.
ಯುವತಿಗೆ ರಕ್ಷಣೆ ನೀಡಲು ಸರ್ಕಾರ ಬದ್ಧವಿದೆ. ಆಕೆಯ ಮನವಿಯಂತೆ ಪಾಲಕರಿಗೂ ರಕ್ಷಣೆ ನೀಡಿದ್ದೇವೆ. ಯುವತಿ ಇರುವ ಸ್ಥಳ ತಿಳಿಸಿದರೆ, ಇದ್ದಲ್ಲಿಯೇ ಹೋಗಿ ಪೊಲೀಸರು ಸುರಕ್ಷತೆ ನೀಡಲಿದ್ದಾರೆ. ಎಸ್ ಐಟಿ ಮೇಲೆ ವಿಶ್ವಾಸ ಇಲ್ಲವೆಂದಾದರೆ ನ್ಯಾಯಾಧೀಶರ ಮುಂದೆ ದೂರು ಕೊಡುವುದಕ್ಕೆ ಅಭ್ಯಂತರವೇನಿಲ್ಲ. ಯಾರು ಏನೇ ಹೇಳಲಿ, ಎಸ್ ಐಟಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನಿಜಾಂಶ ಬಯಲಿಗೆಳೆಯಲಿದೆ ಎಂದು ಬೊಮ್ಮಾಯಿ ಪುನರುಚ್ಚರಿಸಿದರು.