ಕನ್ನಡ ಉಳಿವಿಗೆ ಗ್ರಾಮೀಣ ಸಂಸ್ಕೃತಿ ಕಾರಣ

Rural culture is the reason for the survival of Kannada
ಸಿಂದಗಿ ಪಟ್ಟಣದ ಎಚ್.ಜಿ. ಪಪೂ ಕಾಲೇಜಿನಲ್ಲಿ ನಡೆದ ದತ್ತಿಗೋಷ್ಠಿಗಳ ಕಾರ್ಯಕ್ರಮಕ್ಕೆ ಡಾ. ಅರವಿಂದ ಮನಗೂಳಿ ಚಾಲನೆ ನೀಡಿದರು. ಹಾಸಿಂಪೀರ ವಾಲಿಕಾರ, ಚಂದ್ರಶೇಖರ ದೇವರಡ್ಡಿ, ಮಹಾಂತೇಶ ಪಟ್ಟಣಶೆಟ್ಟಿ, ಶಿವಾನಂದ ಬಡಾನೂರ ಸೇರಿದಂತೆ ಮತ್ತರರಿದ್ದರು.
Published on

ಸಿಂದಗಿ: ಪುರಾತನವಾದ ಕನ್ನಡ ಭಾಷೆಯ ಉಳಿವಿಗೆ ಮೌಖಿಕ ಜಾನಪದ ಪರಂಪರೆಯ ಗ್ರಾಮೀಣ ಸಂಸ್ಕೃತಿಯೇ ಕಾರಣವಾಗಿದೆ ಎಂದು ಪ್ರಾಧ್ಯಾಪಕ ಡಾ. ಅರವಿಂದ ಮನಗೂಳಿ ಹೇಳಿದರು.

ಪಟ್ಟಣದ ಎಚ್.ಜಿ. ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಘಟಕದಿಂದ ಕಲ್ಲವ್ವ ರಂಗಪ್ಪ ಹೆಗ್ಗನದೊಡ್ಡಿ ಹಾಗೂ ಗೌರಮ್ಮ ಸಿದ್ರಾಮಪ್ಪ ವಾಡೇದ ಅವರ ಗೌರವಾರ್ಥ ಬುಧವಾರ ಹಮ್ಮಿಕೊಂಡಿದ್ದ ದತ್ತಿಗೋಷ್ಠಿಗಳನ್ನು ಉದ್ಘಾಟಿಸಿ ಅವರು ಮಾತನಾಡಿ, ಮೈಸೂರಿನ ಅರಸರು ಕನ್ನಡ ಭಾಷೆ ಉಳಿಸಿ, ಸಾಹಿತ್ಯ ಪರಿಷತ್ತನ್ನು ಪೋಷಿಸಿಕೊಂಡು ಬಂದಿದ್ದಾರೆ ಎಂದರು.

ಉಪನ್ಯಾಸಕಿ ಹೇಮಾ ಹಿರೇಮಠ ಶಿಕ್ಷಣ ಮತ್ತು ಸಾಹಿತ್ಯ ವಿಷಯ ಕುರಿತು ಮಾತನಾಡಿ, ಶಿಕ್ಷಣ ಜನ ಜೀವನಕ್ಕೆ ಅಭಿವೃದ್ಧಿಯನ್ನು ಸೂಚಿಸುತ್ತದೆ. ಮಾತೃ ಭಾಷೆಯಲ್ಲಿ ಪಡೆದ ಶಿಕ್ಷಣ ಜ್ಞಾನವನ್ನು ವೃದ್ಧಿಸುತ್ತದೆ. ಅಂತೆಯೇ ಶಿಕ್ಷಣ ಮತ್ತು ಸಾಹಿತ್ಯಗಳೆರೆಡು ಕಣ್ಣುಗಳಿದ್ದಂತೆ ಎಂದರು.

ಪ್ರೊ. ಮುಕ್ತಾಯಕ್ಕ ಕತ್ತಿ ಅವರು ಜಾನಪದ ಸಾಹಿತ್ಯದಲ್ಲಿ ನೀತಿ ಕುರಿತು ಮಾತನಾಡಿ, ಗ್ರಾಮೀಣ ಜನ ಸಂಸ್ಕೃತಿಯ ಸಾಹಿತ್ಯವಾಗಿರುವ ಜಾನಪದ ಮೌಲ್ಯ ಮತ್ತು ಬದುಕಿನ ಸಂಗತಿಗಳಲ್ಲಿ ನೀತಿಯ ಮಾತುಗಳನ್ನು ಅಳವಡಿಸಿಕೊಳ್ಳುವ ಸಾಹಿತ್ಯವನ್ನು ರೂಪಿಸಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೂ 175 ದತ್ತಿ ಗೋಷ್ಠಿಗಳನ್ನು ಏರ್ಪಡಿಸಿದ್ದೇವೆ. ಪ್ರತಿ ಭಾನುವಾರ ಸಾಹಿತ್ಯ ಗೋಷ್ಠಿಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ತಾಲೂಕು ಸಮ್ಮೇಳನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ದತ್ತಿದಾನಿ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ, ಪ್ರೊ. ರಾ.ಶಿ. ವಾಡೇದ, ಶಿವಾನಂದ ಬಡಾನೂರ ಪ್ರಾಸ್ತಾವಿಕ ಮಾತನಾಡಿದರು. ಮಹಾಂತೇಶ ಪಟ್ಟಣಶೆಟ್ಟಿ, ಶಿವಕುಮಾರ ಕಲ್ಲೂರ, ಚಂದ್ರಶೇಖರ ದೇವರಡ್ಡಿ, ಅಶೋಕ ಸುಲ್ಪಿ, ಅಬ್ದುಲ್‌ಖಾದರ ವಾಲಿಕಾರ, ಶಾಂತಪ್ಪ ರಾಣಾಗೋಳ ಮತ್ತಿತರರಿದ್ದರು. ಅನಿತಾ ಹಾರಿವಾಳ ಪ್ರಾರ್ಥಿಸಿದರು. ಶಾಂತಿಲಾಲ ಚವ್ವಾಣ ಸ್ವಾಗತಿಸಿದರು. ಪ್ರೊ. ಸಿದ್ದಲಿಂಗ ಕಿಣಗಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net