ಯತ್ನಾಳ್ ನಿಜವಾದ ಗುರಿ ಮೋದಿಯವರು ಎನ್ನುವುದು ನಿಧಾನವಾಗಿ ಬಯಲಾಗತೊಡಗಿದೆ:ಸಿದ್ದರಾಮಯ್ಯ

CM
Published on

ಬೆಂಗಳೂರು: ಮೌಲ್ವಿ ತನ್ವೀರ್ ಹಾಶ್ಮಿ ಅವರ ಜೊತೆಗಿನ ನನ್ನ ಪೋಟೊವನ್ನು ಹಿಡ್ಕೊಂಡು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನನ್ನ ವಿರುದ್ದ ಆರೋಪ ಮಾಡಿದರೂ ಅವರ ನಿಜವಾದ ಗುರಿ ಪ್ರಧಾನಿ ನರೇಂದ್ರ ಮೋದಿ ಅವರು ಎನ್ನುವುದು ನಿಧಾನವಾಗಿ ಬಯಲಾಗತೊಡಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್​​​​ನಲ್ಲಿ ಪೋಸ್ಟ್ ಮಾಡಿದ್ದಾರೆ.  

ಈ ಕುರಿತು ಪೋಸ್ಟ್ ಮಾಡಿರುವ ಸಿದ್ದರಾಮಯ್ಯ ಅವರು ಮೌಲ್ವಿ ಹಾಶ್ಮಿ ಅವರ ಜೊತೆಗೆ ಇತರ ಬಿಜೆಪಿ ನಾಯಕರು ಮಾತ್ರವಲ್ಲ ಸಾಕ್ಷಾತ್ ನರೇಂದ್ರ ಮೋದಿ ಅವರೂ ಸಂಬಂಧ ಹೊಂದಿರುವುದು ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ಪೋಟೊಗಳು ಸ್ಪಷ್ಟವಾಗಿ ಹೇಳುತ್ತಿವೆ. ದೀರ್ಘಕಾಲದಿಂದ ಹಾಶ್ಮಿ ಅವರಿಗೆ ಅತ್ಯಂತ ಆತ್ಮೀಯರಾಗಿರುವ ಮತ್ತು ಊರಿನಲ್ಲಿ ತನ್ನ ನೆರೆಹೊರೆಯಾಗಿರುವ ಯತ್ನಾಳ್ ಅವರಿಗೆ ಇದು ತಿಳಿದಿರಲಿಲ್ಲ ಎನ್ನುವುದನ್ನು ನಂಬಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಆರೋಪವೇ ಸುಳ್ಳು
ಇತ್ತ ಕಡೆ ಐಸಿಸ್ ಉಗ್ರರ ಜೊತೆಗೆ ನಂಟು ಹೊಂದಿರುವ ಮೌಲ್ವಿ ತನ್ವೀರ್ ಹಾಶ್ಮಿ ಕುಟುಂಬದ ಜೊತೆಗೆ ನಾನು ವ್ಯಾವಹಾರಿಕ ಪಾಲುದಾರಿಕೆ ಹೊಂದಿದ್ದೇನೆ ಎಂಬ ಆರೋಪವೇ ಸುಳ್ಳು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದ್ದಾರೆ. ಬೆಳಗಾವಿ ಸುವರ್ಣಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು, “‌ಮೌಲ್ವಿ ಹಾಶ್ಮಿ ಕುಟುಂಬಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅವನೊಬ್ಬ ಭಯೋತ್ಪಾದಕ. ಅವರ ವ್ಯವಹಾರದಲ್ಲಿ ನಾನು ಪಾಲುದಾರನಲ್ಲ” ಎಂದು ಹೇಳಿದರು.

ಯತ್ನಾಳ್ ಮೇಲೆ ಆರೋಪ
ಬಸನಗೌಡ ಪಾಟೀಲ ಯತ್ನಾಳ್ ಮತ್ತು ಜಮಾತ್‌ ಎ ಅಹಲೆ ಸುನ್ನತ್‌ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರೂ ಆದ ಮೌಲ್ವಿ ತನ್ವೀರ್‌ ಹಾಶ್ಮಿ, ಗಾಂಧಿ ಚೌಕದ ಬಳಿಯಿರುವ ‘ಟೂರಿಸ್ಟ್‌ ಹೋಟೆಲ್‌’ನ ಪಾಲುದಾರರು ಎಂಬ ಮಾಹಿತಿ ಚರ್ಚೆಗೆ ಗ್ರಾಸವಾಗಿದೆ. ವಿಜಯಪುರ–ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಬಳಿ ಯತ್ನಾಳ್ ಹಾಗೂ ಮೌಲ್ವಿ ಹಾಶ್ಮಿ ಮನೆಗಳು‌ ಮತ್ತು ವಾಣಿಜ್ಯ ಮಳಿಗೆಗಳು ಅಕ್ಕಪಕ್ಕದಲ್ಲಿವೆ. ಇಬ್ಬರಲ್ಲಿ ವೈಮನಸ್ಸು ದಿಢೀರ್ ಮೂಡಲು ಕಾರಣ ಏನು ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net