ಜ.1ರಿಂದ ಪಶು ವೈದ್ಯರ ಅನಿರ್ದಿಷ್ಟಾವಧಿ ಪ್ರತಿಭಟನೆ

Published on

ಗಂಗಾಧರ್ ಬೈರಾಪಟ್ಟಣ, ರಾಮನಗರ

ಕಾಲಮಿತಿ ಬಡ್ತಿ, ಪಶು ಆಸ್ಪತ್ರೆಗಳ ಸ್ಥಳಾಂತರ ಸ್ಥಗಿತ, ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಪಡಿಸಿ ಹೊಸ ವರ್ಷದ ಮೊದಲ ದಿನ (ಜ.1)ದಿಂದಲೇ ಪಶುವೈದ್ಯರು ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಅಸಹಕಾರ ಚಳವಳಿ ಹಮ್ಮಿಕೊಳ್ಳಲು ತೀರ್ಮಾನಿಸಿದ್ದಾರೆ. ಕಳೆದ 12 ವರ್ಷಗಳಿಂದಲೂ ವಿವಿಧ ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ಮಾಡುತ್ತಲೇ ಬಂದಿರುವ ರಾಜ್ಯ ಪಶುವೈದ್ಯಕೀಯ ಸಂಘ, ಇದುವರೆಗೆ ಹೋರಾಟಕ್ಕೆ ಸ್ಪಂದನೆ ಸಿಗದ ಕಾರಣ ಅಸಹಕಾರ ಚಳವಳಿಯ ನಿರ್ಧಾರಕ್ಕೆ ಬಂದಿದ್ದಾರೆ.

ಸಿಕ್ಕೇ ಇಲ್ಲ ಕಾಲಮಿತಿ ಬಡ್ತಿ:

ಅಪರ ಮುಖ್ಯಕಾರ್ಯದರ್ಶಿಯಾಗಿದ್ದ ಮೀರಾ ಸಕ್ಸೇನಾ ನೇತೃತ್ವದ ಸಮಿತಿಯ ಶಿಾರಸ್ಸಿನಂತೆ 2012ರ ಡಿಸೆಂಬರ್‌ನಲ್ಲೇ ಇಲಾಖೆ ಪುನಾರಚನೆಯಾಗಿದೆ. ಅದೇ ವರ್ಷ ಡಿ.31ರಿಂದಲೇ ಪೂರ್ವಾನ್ವಯ ಆಗುವಂತೆ ಅನುಷ್ಠಾನಕ್ಕೂ ಇಳಿಸಲಾಗಿದೆ. ಆದರೆ ಕಾಲಮಿತಿ ಬಡ್ತಿ ನೀಡುವ ವಿಚಾರದಲ್ಲಿ ಸಮಿತಿಯ ಶಿಫಾರಸ್ಸಿಗೆ ತಿಲಾಂಜಲಿ ಇಟ್ಟ ಸರ್ಕಾರ, 2017ರಿಂದ ಅನ್ವಯವಾಗುವಂತೆ 6 ಮತ್ತು 13 ವರ್ಷಗಳ ಕಾಲಮಿತಿ ಬಡ್ತಿ ನೀಡಿದೆ. ಇದರಿಂದ ಹಿಂದಿನ ನಿಯಮಗಳಂತೆ ಅರ್ಹರಿಂದ ಬಹುತೇಕ ವೈದ್ಯರು ಬಡ್ತಿಯಿಂದ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ, ಸರ್ಕಾರಗಳು ಸ್ಪಂದಿಸಿಲ್ಲ.

2020ರ ಹೊಸ ನಿಯಮದಂತೆ 1,250 ಘಟಕಗಳಿಗೆ ಓರ್ವ ವೈದ್ಯ ಎಂದು ನಿಗದಿಪಡಿಸಲಾಗಿದೆ. ಈ ನಿಯಮದಂತೆ ಜಾನುವಾರುಗಳ ಘಟಕಗಳು ಕಡಿಮೆ ಇದ್ದರೆ ಅಂತಹ ಆಸ್ಪತ್ರೆ ಮತ್ತು ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಸೇವೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವುದು ವೈದ್ಯರ ಆರೋಪ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಇಂತಹ ಅಸಂಬದ್ಧ ನಿಯಮ ರದ್ದುಗೊಳಿಸಬೇಕು ಎನ್ನುವುದು ಅವರ ಪ್ರಮುಖ ಬೇಡಿಕೆ.

ಭತ್ಯೆ ನೀಡುತ್ತಿಲ್ಲ !

ಸರ್ಕಾರ ಸಂಚಾರಿ ಪಶುವೈದ್ಯ ಸೇವೆಯನ್ನು ಆರಂಭಿಸಿದ್ದು, ಈ ಯೋಜನೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ 56,100 ರೂ. ಸಂಬಳ ನಿಗದಿ ಮಾಡಿದೆ. ಆದರೆ ಈ ಸೇವೆಯನ್ನು ಗುತ್ತಿಗೆ ಪಡೆದಿರುವ ಸಂಸ್ಥೆಯು ವೈದ್ಯರಿಗೆ ಕೇವಲ 40-45 ಸಾವಿರ ರೂಪಾಯಿ ನೀಡುತ್ತಿದೆ. ಮತ್ತೊಂದೆಡೆ ವೈದ್ಯರ ಕೊರತೆ ಕಾರಣ ಒಬ್ಬ ವೈದ್ಯರಿಗೆ 2-3 ಪಶು ಚಿಕಿತ್ಸಾ ಘಟಕಗಳ ಪ್ರಭಾರವನ್ನೂ ನೀಡಿದ್ದು, ಪ್ರಭಾರ ಭತ್ಯೆ ಮಾತ್ರ ನೀಡುತ್ತಿಲ್ಲ. ಇಷ್ಟೇ ಅಲ್ಲದೆ, ಆಸ್ಪತ್ರೆಗಳಿಗೆ ಔಷಧಗಳ ಪೂರೈಕೆ ಆಗದ ಹಿನ್ನೆಲೆಯಲ್ಲಿ ರೈತರ ಆಕ್ರೋಶಕ್ಕೆ ತುತ್ತಾಗುತ್ತಿದ್ದು, ಸಮರ್ಪಕ ಔಷಧ ಪೂರೈಸಬೇಕು ಎಂಬುದು ವೈದ್ಯರು ಬೇಡಿಕೆ.

ಸ್ಪಂದಿಸುವುದೇ ಸರ್ಕಾರ ?

ಕಳೆದ 12 ವರ್ಷಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ವೈದ್ಯರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ ಸರ್ಕಾರಗಳು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದು ಬಿಟ್ಟರೆ ಉಳಿದಂತೆ ಮಾಡಿದ್ದು ಶೂನ್ಯ. ಕಾಲಮಿತಿ ಬಡ್ತಿಯಲ್ಲಾದ ಲೋಪದ ಬಗ್ಗೆ ಕೋರ್ಟ್ ನೀಡಿದ ಆದೇಶ ಸಹ ಪಾಲಿಸುವಲ್ಲಿಯೂ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಈಗ ಫ್ರೂಟ್ ಐಡಿ ಕಾಟ

ವೈದ್ಯರ ಕೊರತೆ ನಡುವೆ ಗ್ರಾಮೀಣ ಭಾಗದಲ್ಲಿ ಪಶುಗಳ ಆರೋಗ್ಯ ಆರೈಕೆಯ ಕಾಳಜಿ ವಹಿಸುವ ವೈದ್ಯರಿಗೆ ಈಗ ಫ್ರೂಟ್ ಐಡಿ ಸೃಜಿಸುವ ಕೆಲಸದ ಹೆಚ್ಚುವರಿ ಹೊಣೆ ನೀಡಲಾಗಿದೆ. ರೋಗಗ್ರಸ್ಥ ರಾಸುಗಳಿಗೆ ಚಿಕಿತ್ಸೆ ನೀಡಬೇಕೋ, ಇಲ್ಲ ಫ್ರೂಟ್ ಐಡಿ ಸೃಜನೆ ಮಾಡಬೇಕೋ ಎನ್ನುವ ಗೊಂದಲ ವೈದ್ಯರಲ್ಲಿದೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಅವರೂ ಸಹ ಜಿಲ್ಲಾಧಿಕಾರಿ ಆದೇಶದ ಮುಂದೆ ಅಸಹಾಯಕರಾಗಿದ್ದು, ಆತಂಕ ಮತ್ತು ಒತ್ತಡದಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂಬುದು ಕೇಳಿಬರುತ್ತಿದೆ.

ಸಾವಿರ ಹುದ್ದೆ ಖಾಲಿ

ರಾಜ್ಯದಲ್ಲಿ ಮುಖ್ಯ ಪಶುವೈದ್ಯಾಧಿಕಾರಿಗಳು, ಸಹಾಯಕ ನಿರ್ದೇಶಕರು, ಹಿರಿಯ ಪಶುವೈದ್ಯಾಧಿಕಾರಿಗಳ ಒಟ್ಟು 3,317 ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದೆ. ಇದರಲ್ಲಿ 2,152 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಇನ್ನೂ 1,165 ಹುದ್ದೆಗಳು ಖಾಲಿ ಉಳಿದಿವೆ. ಖಾಲಿ ಇರುವ ಪಶು ವೈದ್ಯರ ಹುದ್ದೆಗಳಲ್ಲಿ ಹೆಚ್ಚಿನ ಭಾಗದ ಗ್ರಾಮೀಣ ಭಾಗದ ಹುದ್ದೆಗಳಾಗಿದ್ದು, ಹಳ್ಳಿಗಳಲ್ಲಿ ವೈದ್ಯರ ಸೇವೆ ಮೇಲೆ ಪರಿಣಾಮ ಬೀರುತ್ತಿದೆ.

ಬೇಡಿಕೆಗಳೇನು ?
*2012ರಿಂದ ಪೂರ್ವಾನ್ವಯವಾಗುವಂತೆ 6 ಮತ್ತು 13 ವರ್ಷಗಳ ಕಾಲಮಿತಿ ಬಡ್ತಿ * ಪಶು ಆಸ್ಪತ್ರೆಗಳು ಮತ್ತು ಸಿಬ್ಬಂದಿ ಸ್ಥಳಾಂತರ ಸ್ಥಗಿತ * ನೂತನ ತಾಲೂಕು ಮತ್ತು ಜಿಲ್ಲೆಗಳಲ್ಲಿ ಕಚೇರಿಗಳ ಸ್ಥಾಪನೆ * ಸಕಾಲಕ್ಕೆ ಅಗತ್ಯ ಔಷಧಗಳ ಪೂರೈಕೆ * ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಮೇಲ್ದರ್ಜೆಗೆ * ಹೆಚ್ಚುವರಿ ಪ್ರಭಾರ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಪ್ರಭಾರ ಭತ್ಯೆ * ಇಲಾಖೆ ಖಾಲಿ ಹುದ್ದೆಗಳನ್ನು ಭರ್ತಿ * ಸಂಚಾರಿ ಪಶುವೈದ್ಯಕೀಯ ಘಟಕದ ಪಶು ವೈದ್ಯರಿಗೆ ನಿಯಮಾನುಸಾರ ವೇತನ
ನಮ್ಮ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ 12 ವರ್ಷಗಳಿಂದಲೂ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಈ ಹಿನ್ನೆಲೆಯಲ್ಲಿ ಈಗ ಮತ್ತೊಮ್ಮೆ ಮನವಿ ಸಲ್ಲಿಸಿದ್ದು, ಒಂದು ವೇಳೆ ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದರೆ ಜ.1ರಿಂದ ಅನಿರ್ದಿಷ್ಟಾವಧಿ ಅಸಹಕಾರ ಹೋರಾಟ ಹಮ್ಮಿಕೊಳ್ಳುತ್ತೇವೆ.
ಡಾ.ಎಂ.ರಾಮಚಂದ್ರಯ್ಯ. ಪ್ರಧಾನ ಕಾರ್ಯದರ್ಶಿ, ರಾಜ್ಯ ಪಶು ವೈದ್ಯಕೀಯ ಸಂಘ, ಬೆಂಗಳೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net