ಆರ್​ಟಿಒ ಅಧಿಕಾರಿಗಳಿಗೆ ಕಂಟ್ರೋಲ್ ರೂಂ ಡ್ಯೂಟಿ

bangalore-traffic630
Published on

- ಸಾರಿಗೆ ಇಲಾಖೆ ಮಾಹಿತಿಗೆ 24/7 ನಿಯಂತ್ರಣ ಕೊಠಡಿ - ದಿನಕ್ಕೊಂದು ಕಚೇರಿಯಿಂದ ಅಧಿಕಾರಿಗಳ ನಿಯೋಜನೆ

ಬೆಂಗಳೂರು: ಕರೊನಾ ಹರಡುವಿಕೆ ತಡೆಯಲು ಹೊರ ರಾಜ್ಯದಿಂದ ಆಗಮಿಸುವ ಪ್ರಯಾಣಿಕ ವಾಹನಗಳ ನಿಯಂತ್ರಣ ಹಾಗೂ ಸರಕು ಸಾಗಣೆ ವಾಹನಗಳ ಸುಗಮ ಸಂಚಾರಕ್ಕಾಗಿ ಸಾರಿಗೆ ಇಲಾಖೆ 24/7 ನಿಯಂತ್ರಣ ಕೊಠಡಿ ಆರಂಭಿಸಿದ್ದು, ದಿನಕ್ಕೊಂದು ಆರ್​ಟಿಒ ಕಚೇರಿಯಿಂದ ಇಬ್ಬರು ಅಧಿಕಾರಿಗಳು ಕಂಟ್ರೋಲ್ ರೂಂ ನಿರ್ವಹಣೆ ಜವಾಬ್ದಾರಿ ನಿರ್ವಹಿಸಬೇಕಿದೆ.

ಸರ್ಕಾರದ ಆದೇಶದ ಮೇರೆಗೆ ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ. ಆದರೆ, ಸರ್ಕಾರದ ಈ ಹೊಸ ಯೋಜನೆಗೆ ಸಾರಿಗೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆರ್​ಟಿಒ ಕಚೇರಿಗಳಲ್ಲಿ ಈಗಾಗಲೇ ಸಿಬ್ಬಂದಿ ಕೊರತೆಯಿದ್ದು, ಇರುವವರ ಮೇಲೆ ಕೆಲಸದ ಒತ್ತಡ ಹೆಚ್ಚಿದೆ. ಇಂಥ ಪರಿಸ್ಥಿತಿಯಲ್ಲಿ ನಿಯಂತ್ರಣ ಕೊಠಡಿ ನಿರ್ವಹಣೆ ಜವಾಬ್ದಾರಿ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಕರೊನಾ ನಿರ್ವಹಣೆಗಾಗಿ ಸರ್ಕಾರವೇ ಆರಂಭಿಸಿದ್ದ ರಾಜ್ಯ ಹಾಗೂ ಬಿಬಿಎಂಪಿ ಕೋವಿಡ್ ವಾರ್ ರೂಂಗಳನ್ನೇ ಮುಚ್ಚಲಾಗಿದೆ. ಸಾರಿಗೆ ಇಲಾಖೆಗೆ ಪ್ರತ್ಯೇಕ ಕಂಟ್ರೋಲ್ ರೂಂ ತೆಗೆಯುವ ಅಗತ್ಯವಿಲ್ಲ. ಇಲ್ಲಿಗೆ ಕರೆ ಮಾಡುವವರೆಲ್ಲ ಸೇವಾಸಿಂಧು, ಸಹಾಯಧನ ಸೇರಿ ಇನ್ನಿತರ ಸಮಸ್ಯೆಗಳ ಕುರಿತು ಮಾಹಿತಿ ಕೇಳುತ್ತಾರೆ. ಎಆರ್​ಟಿಒ ಅಥವಾ ಎಸ್​ಡಿಎ/ಎಫ್​ಡಿಎಗಳು ಏನು ಮಾಹಿತಿ ಕೊಡಲು ಸಾಧ್ಯತೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿನಿತ್ಯ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆ, ಮಧ್ಯಾಹ್ನ 2ರಿಂದ ರಾತ್ರಿ 10 ಹಾಗೂ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ 3 ಪಾಳಿಯಲ್ಲಿ ಕೆಲಸ ನಿರ್ವಹಿಸಬೇಕಿದೆ. ಬೆಂಗಳೂರು ವ್ಯಾಪ್ತಿಯಲ್ಲಿರುವ 10 ಆರ್​ಟಿಒ ಕಚೇರಿಗಳ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎಬಿಸಿಡಿ ಎಂದು ಪಾಳಿಗೆ ನಿಯೋಜಿಸಿ ಆದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net