

ಬೆಂಗಳೂರು: ಸರ್ಕಾರಿ ಕಚೇರಿಯಲ್ಲೇ ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿದ್ದ ಆರ್ಟಿಐ ಕಾರ್ಯಕರ್ತನನ್ನು ರಾಜಧಾನಿಯ ಪೊಲೀಸರು ಬಂಧಿಸಿದ್ದಾರೆ. ಆರ್ಟಿಐ ಕಾರ್ಯಕರ್ತ ಕೃಷ್ಣಮೂರ್ತಿ ಬಂಧಿತ ಆರೋಪಿ.
ಈತ ಬೆಂಗಳೂರಿನ ಕತ್ರಿಗುಪ್ಪೆ ವಾರ್ಡ್ ನಂ.163ರ ವಾರ್ಡ್ ಅಸಿಸ್ಟೆಂಟ್ ಇಂಜಿನಿಯರ್ ಶ್ವೇತಾ ಅವರ ಕಚೇರಿಗೆ ಡಿ. 18ರಂದು ತೆರಳಿದ್ದ. ಅಲ್ಲಿ ಶ್ವೇತಾ ಅವರನ್ನು ನಿಂದಿಸಿದ್ದಲ್ಲದೆ, ನೀನು ಸರ್ಕಾರದ ಯಾವ ಡಿಪಾರ್ಟ್ಮೆಂಟ್ಗೆ ಹೋದ್ರೂ ಬಿಡಲ್ಲ, ನಿನ್ನನ್ನು ಹೇಗೆ ಕೆಲಸದಿಂದ ತೆಗೆಯಬೇಕು ಎಂದು ಗೊತ್ತಿದೆ ಎಂದು ಬೆದರಿಸಿದ್ದ.
ಮಾತ್ರವಲ್ಲ, ಮಹಿಳಾ ಅಧಿಕಾರಿ ಹೋದಲ್ಲೆಲ್ಲ ಹಿಂಬಾಲಿಸಿಕೊಂಡು ಹೋಗಿ ಕಿರುಕುಳ ನೀಡಿದ್ದ. ಇದರಿಂದ ಬೇಸತ್ತ ಶ್ವೇತ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರಿಗೆ ದೂರು ನೀಡಿದ್ದರು. ಆ ದೂರಿನ ಮೇರೆಗೆ ಪೊಲೀಸರು ಕೃಷ್ಣಮೂರ್ತಿಯನ್ನು ಬಂಧಿಸಿದ್ದಾರೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.