

ಬೆಂಗಳೂರು: ಮಂಗಳೂರಿನ ಬಳಿಕ ಪಕ್ಕದ ಉಡುಪಿ ಜಿಲ್ಲೆಗೂ ಒಮಿಕ್ರಾನ್ ಪ್ರವೇಶಿಸಿದ್ದು, ಉಡುಪಿಯಲ್ಲೇ ಇಂದು ಎರಡು ಪ್ರಕರಣ ಪತ್ತೆಯಾಗಿದೆ. ಮುಂಬರುವ ಜನವರಿ ಅಥವಾ ಫೆಬ್ರವರಿ ವೇಳೆಗೆ ಮೂರನೇ ಅಲೆಯ ಸಾಧ್ಯತೆ ಕುರಿತು ತಜ್ಞರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿ ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ಏರುತ್ತಿದ್ದು, ಇದು ಸಮುದಾಯಕ್ಕೆ ಸೋಂಕು ಹರಡಿರುವ ಆತಂಕ ಸೃಷ್ಟಿಸಿದೆ.
ರಾಜ್ಯದಲ್ಲಿ ಸೋಮವಾರ ಧಾರವಾಡದಲ್ಲಿ 54 ವರ್ಷದ ಮಹಿಳೆ, ಭದ್ರಾವತಿಯಲ್ಲಿ 20 ವರ್ಷದ ಯುವತಿ, ಮಂಗಳೂರಿನಲ್ಲಿ 19 ವರ್ಷದ ಯುವತಿ, ಉಡುಪಿಯಲ್ಲಿ 82 ವರ್ಷದ ವೃದ್ಧ ಹಾಗೂ 73 ವರ್ಷದ ವೃದ್ಧೆಯಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕು ಪ್ರಕರಣಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ಈವರೆಗೂ ಸೋಂಕಿಗೆ ಒಳಗಾದವರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕದ ಇಬ್ಬರು, ಬ್ರಿಟನ್-2 ಮಂದಿ, ನೈಜೀರಿಯಾ ಒಬ್ಬರು ಹಾಗೂ ನವದೆಹಲಿಯ ಇಬ್ಬರು. ಉಳಿದಂತೆ ಮಂಗಳೂರು 6, ಉಡುಪಿ 2, ಬೆಂಗಳೂರು 1, ಭದ್ರಾವತಿ 1, ಧಾರವಾಡ 1 ಒಟ್ಟು 19 ಮಂದಿಯಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಈ ಪೈಕಿ ಮೊದಲ ಸೋಂಕಿತ ವ್ಯಕ್ತಿ ನಾಪತ್ತೆಯಾಗಿದ್ದು, ಇಬ್ಬರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರ ಸಂಪರ್ಕಿತರ ಪತ್ತೆ ಕಾರ್ಯ ಮುಂದುವರೆದಿದೆ.
ಪ್ರಯಾಣ ಹಿನ್ನೆಲೆ ಹೊಂದಿಲ್ಲ: ಹೊಸದಾಗಿ ವರದಿಯಾಗಿರುವ ಐದು ಸೋಂಕು ಪ್ರಕರಣಗಳಲ್ಲಿ ಸೋಂಕಿತರಾರೂ ಪ್ರಯಾಣ ಹಿನ್ನೆಲೆ ಹೊಂದಿಲ್ಲ. ಅಲ್ಲದೆ ರಾಜ್ಯದಲ್ಲಿ ಒಮಿಕ್ರಾನ್ ಮೊದಲ ಸೋಂಕಿತರು ಸೇರಿ ಐವರು ವಿದೇಶಿ ಪ್ರಯಾಣಿಕರಾಗಿದ್ದು, ಇಬ್ಬರು ದೆಹಲಿ ಮೂಲದವರು. ಆದರೆ ಇದೀಗ ವರದಿಯಾಗಿರುವ 5 ಪ್ರಕರಣಗಳಲ್ಲಿ ಎಲ್ಲರೂ ಸ್ಥಳೀಯರೇ ಆಗಿದ್ದಾರೆ. ಒಟ್ಟು 19 ಒಮಿಕ್ರಾನ್ ಸೋಂಕಿತರಲ್ಲಿ 12 ಮಂದಿ ಸ್ಥಳೀಯರೇ ಆಗಿದ್ದು, ರಾಜ್ಯಾದ್ಯಂತ ಸೋಂಕು ಹರಡಿರುವ ಭೀತಿ ಎದುರಾಗಿದೆ.