ಮಳೆಗಾಲದಲ್ಲಿ ಜೀವಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಿ

2 Min Read
ಮಳೆಗಾಲದಲ್ಲಿ ಜೀವಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಿ
ಉಡುಪಿಯ ಡಿಸಿ ಕಚೇರಿಯಲ್ಲಿ ವಿದ್ಯಾಕುಮಾರಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದರು. ಪ್ರತೀಕ್​ ​ ಬಾಯಲ್​, ಮಮತಾದೇವಿ ಜಿ.ಎಸ್​., ರಶ್ಮಿ ಎಸ್​., ರಾಯಪ್ಪ ಹಾಗೂ ವಿವಿಧ ಅಧಿಕಾರಿಗಳು ಇದ್ದರು

ಅಧಿಕಾರಿಗಳಿಗೆ ಉಡುಪಿ ಜಿಲ್ಲಾಧಿಕಾರಿ ಸೂಚನೆ | ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ

ಉಡುಪಿ: ಮಳೆಯಿಂದ ಉಂಟಾಗುವ ನೆರೆ, ಸಿಡಿಲು ಬಡಿತ ಸೇರಿದಂತೆ ಇನ್ನಿತರ ಪ್ರಕೃತಿ ವಿಕೋಪಗಳಲ್ಲಿ ಜೀವಹಾನಿ ಹಾಗೂ ಆಸ್ತಿ-ಪಾಸ್ತಿ ಹಾನಿ ತಪ್ಪಿಸಲು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, ಮುಂಗಾರು ಪೂರ್ವ ಹಾಗೂ ಮುಂಗಾರಿನಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಯಾವುದೇ ಅವಘಡ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಬೇಕು ಎಂದರು.

ಜನರಿಗೆ ಜಾಗೃತಿ ಮೂಡಿಸಿ

ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಧ್ವನಿವರ್ಧಕಗಳ ಮೂಲಕ ಸುರಕ್ಷತಾ ಕ್ರಮ ಕೈಗೊಳ್ಳುವ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು. ಮಳೆಗಾಲದಲ್ಲಿ ಎಲ್ಲೆಂದರಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ಸಂಗ್ರಹವಾಗಿರದಂತೆ ನೋಡಿಕೊಳ್ಳಲು ಜನರಿಗೆ ಅರಿವು ಮೂಡಿಸಬೇಕು. ಸಾಂಕ್ರಾಮಿಕ ರೋಗಗಳ ಚಿಕಿತ್ಸೆಗೆ ಅಗತ್ಯವಿರುವ ಔಷಧ ದಾಸ್ತಾನು ಇಟ್ಟುಕೊಂಡಿರಬೇಕು ಎಂದರು.

ಸಮಸ್ಯೆಗೆ ಕೂಡಲೇ ಸ್ಪಂದಿಸಿ

ಗ್ರಾಮೀಣ, ಸ್ಥಳೀಯ ಹಾಗೂ ನಗರ ಪ್ರದೇಶ ವ್ಯಾಪ್ತಿಯಲ್ಲಿ ಚರಂಡಿ ಹಾಗೂ ತೋಡುಗಳನ್ನು ಸ್ವಚ್ಛಗೊಳಿಸಬೇಕು. ಕಂಟ್ರೋಲ್​ ರೂಂಗಳು ದಿನದ 24 ಗಂಟೆಯೂ ತೆರೆದಿಟ್ಟು, ದೂರುಗಳು ಬಂದಲ್ಲಿ ಕೂಡಲೇ ಸ್ಪಂದಿಸಬೇಕು. ಭೂ ಕುಸಿತದ ಪ್ರದೇಶ ಗುರುತಿಸಿ, ಅಗತ್ಯ ಕಾಮಗಾರಿ ಕೈಗೊಂಡು ಭೂ ಕುಸಿತ ಆಗದಂತೆ ಎಚ್ಚರ ವಹಿಸಬೇಕು. ಕುಡಿಯುವ ನೀರಿನ ದೂರು ಬಂದಲ್ಲಿ 24 ಗಂಟೆಯ ಒಳಗಾಗಿ ಪೂರೈಕೆ ಮಾಡಬೇಕು. ತಾಲೂಕು ಮಟ್ಟದ ಟಾಸ್ಕ್ ಫೋರ್ಸ್​ ಸಮಿತಿ ಸಭೆ ಕರೆದು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಬೇಕು. ತಾಲೂಕಿನ ತಹಸೀಲ್ದಾರರ ವಿಪತ್ತು ಪಿಡಿ ಖಾತೆಯಲ್ಲಿ 1.5 ಕೋಟಿ ರೂ. ಅನುದಾನ ಲಭ್ಯವಿದೆ ಎಂದರು.

See also  ಗ್ರಂಥಾಲಯಗಳು ಮುಂದಿನ ಜನಾಂಗದ ಆಸ್ತಿ - ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

ಸಭೆಯಲ್ಲಿ ಜಿಪಂ ಸಿಇಒ ಪ್ರತೀಕ್​ ಬಾಯಲ್​, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್​., ಸಹಾಯಕ ಕಮಿಷನರ್​ ರಶ್ಮಿ ಎಸ್​., ಪೌರಾಯುಕ್ತ ರಾಯಪ್ಪ, ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು, ತಹಸೀಲ್ದಾರರು, ತಾಪಂ ಇಒ ಉಪಸ್ಥಿತರಿದ್ದರು.

ಸಮನ್ವಯದೊಂದಿಗೆ ಕೆಲಸ ಮಾಡಿ

ಹೆದ್ದಾರಿ ಸೇರಿದಂತೆ ಇತರ ರಸ್ತೆಗಳ ಮೇಲೆ ಮರ ಉರುಳಿ ಬಿದ್ದಾಗ ತಕ್ಷಣಕ್ಕೆ ಸ್ಪಂದಿಸಿ, ತೆರವುಗೊಳಿಸಬೇಕು. ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಮಳೆಗಾಲದ ಮೊದಲು ಯಾಂತ್ರೀಕೃತ ದೋಣಿಯಲ್ಲಿ ಮೀನುಗಾರಿಕೆ ಹಾಗೂ ಆಳ ಸಮುದ್ರದ ಮೀನುಗಾರಿಕೆ ನಿಷೇಧಿಸಬೇಕು. ಹವಾಮಾನ ಇಲಾಖೆಯಿಂದ ಬರುವ ಮಾಹಿತಿಯನ್ನು ಇಲಾಖಾ ಅಧಿಕಾರಿಗಳು ಮೀನುಗಾರರಿಗೆ ತಿಳಿಸಬೇಕು. ತುರ್ತು ನಿಗಾ ಘಟಕಕ್ಕೆ ಅಗತ್ಯವಿರುವ ಸಾಮಾಗ್ರಿ ಇಟ್ಟುಕೊಳ್ಳಬೇಕು. ಈಜುಗಾರರು ಹಾಗೂ ಸ್ವಯಂ ಸೇವಕರ ಸಂಪೂರ್ಣ ಮಾಹಿತಿ ಪಡೆದಿಟ್ಟುಕೊಳ್ಳಬೇಕು. ಸೂಕ್ತ ಪ್ರದೇಶದಲ್ಲಿ ಕಾಳಜಿ ಕೇಂದ್ರ ಗುರುತಿಸಿ, ಸನ್ನದ್ದು ಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಡಿಸಿ ವಿದ್ಯಾಕುಮಾರಿ ತಾಕೀತು ಮಾಡಿದರು.

Share This Article