ರಕ್ತದ ಮಡುವಿನಲ್ಲಿ ಬಿದ್ದು ಅಂಗಲಾಚುತ್ತಿದ್ದ ಮಂಜನ ಪ್ರಾಣ ಜನರ ಕಣ್ಣೆದುರೇ ಹೋಯ್ತು...

murder
Published on

ತುಮಕೂರು: ಲಿಕ್ಕರ್ ಶಾಪ್ ಮುಂದೆ ರೌಡಿಶೀಟರ್​ವೊಬ್ಬ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಯಾರೊಬ್ಬರೂ ಆಸ್ಪತ್ರೆಗೆ ಸೇರಿಸುವ ಧೈರ್ಯ ತೋರಲಿಲ್ಲ. ಪೊಲೀಸರು ಬರುವವರೆಗೆ ಆತ ನೋವಿನಿಂದ ಚೀರಾಡುತ್ತಲೇ ಇದ್ದ. ಕೆಲವೇ ಕ್ಷಣದಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿದೆ. ಅಲ್ಲೇ ಇದ್ದ ಕೆಲವರು ಇದನ್ನು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಗರದ ಬಿ.ಎಚ್.ರಸ್ತೆಯ ಮಂಜುಶ್ರೀ ಲಿಕ್ಕರ್ ಶಾಪ್ ಬಳಿ ರೌಡಿಶೀಟರ್ ಮಂಜುನಾಥ್ ಅಲಿಯಾಸ್ ಮಂಜ(32) ಎಂಬಾತನನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ 9.45ರಲ್ಲಿ ಹತ್ಯೆಗೈದಿದ್ದಾರೆ. ಹತ್ಯೆಗೀಡಾದ ಮಂಜ ಕೆಲವು ವರ್ಷಗಳ ಹಿಂದೆ ಕೊಲೆಗೀಡಾಗಿದ್ದ ನಗರಸಭೆ ಸದಸ್ಯ ಆಂಜನಿಯ ಅಕ್ಕನ ಮಗ.

2012ರಿಂದ ಕ್ಯಾತಸಂದ್ರ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿ ಮಂಜುನಾಥ್ ಹೆಸರಿದ್ದು, ಹೊಸಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣವೊಂದರಲ್ಲಿ ಈತ ಆರೋಪಿಯಾಗಿದ್ದ. 2018ರಲ್ಲಿ ಕೊಲೆಯಾಗಿದ್ದ ಮಾಜಿ ಮೇಯರ್ ಗಡ್ಡ ರವಿ ಜತೆ ಮಂಜುನಾಥ್ ಗುರುತಿಸಿಕೊಂಡಿದ್ದ. ಮೂಲತಃ ಕನಕಪುರ ತಾಲೂಕಿನ ಮಂಜ ಬೆಳೆದಿದ್ದು ತುಮಕೂರಿನಲ್ಲಿಯೇ. ಪೊಲೀಸ್ ಮಾಹಿತಿದಾರನಾಗಿದ್ದ ಎನ್ನಲಾಗಿದೆ.

ಎರಡು ಕೊಲೆ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ. ಬುಧವಾರ ರಾತ್ರಿ ಈತನನ್ನು ದುಷ್ಕರ್ಮಿಗಳು ಚಾಕುವಿನಿಂದ ಹಿರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹೊಸ ಬಡಾವಣೆ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಹಳೇ ದ್ವೇಷ ಇಲ್ಲವೆ ವೈಯಕ್ತಿಕ ದ್ವೇಷದ ಕಾರಣದಿಂದ ಕೊಲೆ ನಡೆದಿದೆಯೇ ಎನ್ನುವ ವಿಚಾರ ತನಿಖೆಯಿಂದ ತಿಳಿಯಲಿದೆ. ಈಗಾಗಲೇ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net