

ಬೆಂಗಳೂರು: ಫೈನಾನ್ಸಿಯರ್ ಮೇಲೆ ಹಲ್ಲೆ ನಡೆಸಿ ಹಣ ದೋಚಿ ಪರಾರಿಯಾಗಿದ್ದ ರೌಡಿ ಕಾಲಿಗೆ ಸಂಪಿಗೆಹಳ್ಳಿ ಇನ್‌ಸ್ಪೆಕ್ಟರ್ ಗುಂಡು ಹಾರಿಸಿ ಭಾನುವಾರ ಬೆಳಗ್ಗೆ ಬಂಧಿಸಿದ್ದಾರೆ. ರೌಡಿ ಇಮ್ರಾನ್ ಅಲಿಯಾಸ್ ಲಾರಿ ಬಂಧಿತ. ಈತನ ಸಹಚರರಾದ ನಿಜಾಮ್ ಅಲಿಯಾಸ್ ಕುಟ್ಟಿ ಹಾಗೂ ಉಬೇದ್ ಎಂಬುವರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಅಶೋಕ್ ಕೈಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಗಿಲು ಲೇಔಟ್‌ನ ಫೈನಾನ್ಸಿಯರ್ ಗೋಪಿಚಂದ್ (56) ಅಂಗಡಿಗಳಿಗೆ ಸಾಲ ಕೊಟ್ಟಿದ್ದರು. ಭಾನುವಾರ ಬೆಳಗ್ಗೆ 10 ಗಂಟೆಗೆ ಗೋಪಿ ಚಂದ್ ಕಂತಿನ ಹಣ ಸಂಗ್ರಹಿಸುತ್ತಿದ್ದಾಗ ಇಮ್ರಾನ್ ಮತ್ತು ಆತನ ಸಹಚರರು ಬಂದು ಚಾಕುವಿನಿಂದ ಬೆದರಿಸಿದ್ದರು. ಗೋಪಿಚಂದ್ ಅವರ ಬ್ಯಾಗ್‌ನಲ್ಲಿದ್ದ 13 ಸಾವಿರ ರೂ. ಮತ್ತು ಬೈಕ್ ಕಸಿದುಕೊಂಡು ಹಾಡಹಗಲೇ ಪರಾರಿಯಾಗಿದ್ದರು. ಈ ಕುರಿತು ಗೋಪಿಚಂದ್ ಠಾಣೆಗೆ ದೂರು ನೀಡಿದ್ದರು.
ಈ ಮೇರೆಗೆ ಇನ್‌ಸ್ಪೆಕ್ಟರ್ ಬಿ.ಮಲ್ಲಿಕಾರ್ಜುನ್ ನೇತೃತ್ವದ ತಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿತ್ತು. ಇಮ್ರಾನ್ ಮತ್ತು ಆತನ ಸಹಚರರು ಬಸವಲಿಂಗಪ್ಪ ಲೇಔಟ್‌ನಲ್ಲಿ ಇರುವ ಬಗ್ಗೆ ಮಲ್ಲಿಕಾರ್ಜುನ್‌ಗೆ ಮಾಹಿತಿ ಲಭ್ಯವಾಗುತ್ತದೆ. ಸ್ಥಳಕ್ಕೆ ಹೋದ ಪೊಲೀಸರನ್ನು ನೋಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಮುಖ್ಯಪೇದೆ ಅಶೋಕ್ ಹಿಡಿಯಲು ಮುಂದಾಗಿದ್ದಾರೆ. ಆಗ ಮಾರಕಾಸ್ತ್ರದಿಂದ ಮುಖ್ಯಪೇದೆ ಮೇಲೆ ಹಲ್ಲೆ ನಡೆಸಿದ್ದು, ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದರು. ಆಗಲೂ ಶರಣಾಗದೆ ಇದ್ದಾಗ ಮಲ್ಲಿಕಾರ್ಜುನ್ ಸರ್ವಿಸ್ ರಿವಾಲ್ವರ್‌ನಿಂದ ಇಮ್ರಾನ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಇಮ್ರಾನ್ ವಿರುದ್ಧ ದಾಬಸ್‌ಪೇಟೆ, ರಾಜಾನುಕುಂಟೆ, ಎಚ್‌ಎಎಲ್, ಬಸವನಗುಡಿ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಹಾಗೂ ರಾಬರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿದ್ದವು.
400 ಹಣಕ್ಕೆ ಕೊಲೆ ಮಾಡಿದ್ದ!
2018ರಲ್ಲಿ ದಾಬಸ್‌ಪೇಟೆಯಲ್ಲಿ 400 ರೂ.ಗೆ ವ್ಯಕ್ತಿಯನ್ನು ಇಮ್ರಾನ್ ಹತ್ಯೆ ಮಾಡಿದ್ದ. ದಾಬಸ್‌ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದಾದ ಮೇಲೆ ಸಿಸಿಬಿ ಪೊಲೀಸರು ರಾಬರಿ ಪ್ರಕರಣದಲ್ಲಿ ಬಂಧಿಸಿ ಎಚ್‌ಎಎಲ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.