

ಬೆಂಗಳೂರು: ಅಪರಾಧ ಹಿನ್ನೆಲೆಯುಳ್ಳವರ ಮನೆ, ಅಡ್ಡೆಗಳ ಮೇಲೆ ಪಶ್ಚಿಮ ವಿಭಾಗ ಪೊಲೀಸರು ಗುರುವಾರ ರಾತ್ರಿ ದಾಳಿ ಮಾಡಿ ಪರಿಶೀಲನೆ ನಡೆಸಿದರು. ಮಾತ್ರವಲ್ಲ, ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳದಂತೆ ಖಡಕ್ ಎಚ್ಚರಿಕೆಯನ್ನೂ ನೀಡಿದರು.
ಪಶ್ಚಿಮ ವಿಭಾಗ ಡಿಸಿಪಿ ಡಾ.ಸಂಜೀವ್ ಎಂ. ಪಾಟೀಲ್ ನೇತೃತ್ವದಲ್ಲಿ 3 ಉಪವಿಭಾಗಗಳ ಅಧಿಕಾರಿ, ಸಿಬ್ಬಂದಿ ಪ್ರತ್ಯೇಕ ತಂಡ ರಚನೆ ಮಾಡಿ ರಾತ್ರಿ 7 ಗಂಟೆಯಿಂದ ಪಾದರಾಯನಪುರ, ರಾಯಪುರ, ಅರತ್‌ನಗರ, ವಿ.ಎಸ್. ಗಾರ್ಡನ್, ಜನತಾ ಕಾಲನಿ ಮತ್ತು ಹಳೇ ಗುಡ್ಡದಹಳ್ಳಿಯಲ್ಲಿ ಅಪರಾಧ ಹಿನ್ನೆಲೆಯುಳ್ಳವರ ಮತ್ತು ರೌಡಿಗಳ ಮನೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಕೆಲವರ ಬಳಿ ಮಾರಕಾಸ್ತ್ರ ಪತ್ತೆಯಾಗಿದ್ದು, ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಪ್ರತಿಯೊಬ್ಬರ ವಿಳಾಸ, ಮೊಬೈಲ್ಫೋನ್ ನಂಬರ್ ಸಂಗ್ರಹಿಸಿ ಅಪರಾಧ ಚಟುವಟಿಕೆಗಳಲ್ಲಿ ತೊಡಗದಂತೆ ಡಿಸಿಪಿ ಡಾ.ಸಂಜೀವ್ ಪಾಟೀಲ್ ಎಚ್ಚರಿಕೆ ನೀಡಿದರು.