

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದ್ದು, ಇದೀಗ ಗ್ಯಾರಂಟಿಗಳಿಗೆ ಹಣ ಒದಗಿಸಲು ಸಾಧ್ಯವಾಗದೆ, ಬೆಲೆ ಏರಿಕೆಯ ಮೂಲಕ ಜನರಿಗೆ ಹೊರೆಯಾಗಿಸಿದೆ. ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆಯನ್ನು ಏರಿಸಿ ಬಡವರ ಮೇಲೆ ಗದಾ ಪ್ರಹಾರ ಮಾಡಿದೆ. ಅವೈಜ್ಞಾನಿಕ ಬಿಟ್ಟಿ ಭಾಗ್ಯಗಳಿಂದ ಸರಕಾರ ದಿವಾಳಿಯತ್ತ ಸಾಗುತ್ತಿದ್ದು, ಇದನ್ನು ಸರಿ ತೂಗಿಸಲು ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಬಡಜನರ ಬದುಕಿನ ಮೇಲೆ ಚೆಲ್ಲಾಟವಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಆರೋಪಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಬೆಲೆ ಏರಿಸಿರುವುದನ್ನು ಖಂಡಿಸಿ ಬಿಜೆಪಿ ಮೂಲ್ಕಿ ಮೂಡುಬಿದಿರೆ ಮಂಡಲ ವತಿಯಿಂದ ಕಿನ್ನಿಗೋಳಿ ಸುಖಾನಂದ ಶೆಟ್ಟಿ ಸರ್ಕಲ್ ಬಳಿ ಗುರುವಾರ ಆಯೋಜಿಸಲಾದ ರಸ್ತೆ ತಡೆ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಮಾತನಾಡಿ, ದಿನದಿಂದ ದಿನಕ್ಕೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನರು ಕಂಗೆಟ್ಟಿದ್ದಾರೆ. ಜನರಿಗೆ 2 ಸಾವಿರ ರೂಪಾಯಿ ಕೊಟ್ಟು 4 ಸಾವಿರ ರೂಪಾಯಿಯನ್ನು ಜನರಿಂದ ಕಿತ್ತುಕೊಳ್ಳಲಾಗುತ್ತಿದೆ. ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಬೆಲೆ ಕಡಿಮೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಬೆಲೆ ಏರಿಕೆ ವಿರುದ್ಧ ಮೂಲ್ಕಿ ಮೂಡುಬಿದಿರೆ ರಾಜ್ಯ ಹೆದ್ದಾರಿಯ ಕಿನ್ನಿಗೋಳಿ ಜಂಕ್ಷನ್ ಬಳಿ ಹೆದ್ದಾರಿ ತಡೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನೀಲ್ ಆಳ್ವ, ಬಿಜೆಪಿ ನಾಯಕರಾದ ಶಾಂತಿಪ್ರಸಾದ್ ಹೆಗ್ಡೆ, ಕಸ್ತೂರಿ ಪಂಜ, ಈಶ್ವರ್ ಕಟೀಲ್, ಭುವನಾಭಿರಾಮ ಉಡುಪ, ಅಭಿಲಾಷ್ ಶೆಟ್ಟಿ ಕಟೀಲು, ರಂಗನಾಥ ಶೆಟ್ಟಿ ಮೂಲ್ಕಿ, ನವೀನ್ ರಾಜ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ವಿನೋದ್ ಬೋಳ್ಳೂರು, ಜೀವನ್ ಶೆಟ್ಟಿ ಅಂಗಾರಗುಡ್ಡೆ, ಕೇಶವ ಕರ್ಕೇರ, ವಿಠ್ಠಲ್ ಎನ್.ಎಂ., ಗೋಪಾಲ ಶೆಟ್ಟಿಗಾರ್, ಕುಸುಮಾ ಚಂದ್ರಶೇಖರ್, ಮಮತಾ ಪೂಂಜ, ಭಾಸ್ಕರ ಶೆಟ್ಟಿ ಏಳಿಂಜೆ, ಹರೀಶ್ ಶೆಟ್ಟಿ ತಾಮಣಿಗುತ್ತು, ಹೇಮನಾಥ ಅಮೀನ್, ಲೋಕೇಶ್ ಪೂಜಾರಿ, ಉದಯ ಅಮೀನ್ ಮಟ್ಟು, ಜೋಕಿಂ ಡಿ’ಕೋಸ್ತ, ರಶ್ಮೀ ಆಚಾರ್ಯ, ಆಶಾ ಸುವರ್ಣ, ಲಕ್ಷಣ್ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.
ಪಣಂಬೂರು ಎಸಿಪಿ ಮನೋಜ್ ಕುಮಾರ್, ಮೂಲ್ಕಿ ಪೊಲೀಸ್ ಇನ್‌ಸ್ಪೆಕ್ಟರ್ ವಿದ್ಯಾಧರ್ ನೇತೃತ್ವದಲ್ಲಿ ಪೊಲೀಸರು ಬಿಗು ಬಂದೋಬಸ್ತು ಏರ್ಪಡಿಸಿದ್ದರು.