

ರವೀಂದ್ರ ಕೋಟ
ಕೊಳವೆಬಾವಿ ಮರುಪೂರಣ ಕೈಗೊಂಡು ಸಾವಯವ ಕೃಷಿಕ ಅಶೋಕ್ ಶೆಟ್ಟಿಗಾರ್ ಮಾದರಿಯಾಗಿದ್ದಾರೆ. ಹುಬ್ಬಳ್ಳಿಯಲ್ಲಿದ್ದ ಉದ್ಯಮಿಯಾಗಿದ್ದ ಅಶೋಕ ಶೆಟ್ಟಿಗಾರ್ ನಗರ ತೊರೆದು ಕುಂಭಾಶಿ ಆನೆಗುಡ್ಡೆ ವಿನಾಯಕ ದೇವಸ್ಥಾನ ಸಮೀಪದ ವಕ್ವಾಡಿಗೆ ಕುಟುಂಬ ಸಮೇತರಾಗಿ ಬಂದು ನೆಲೆಸಿದ್ದರು. ರಸ್ತೆ ಪಕ್ಕದಲ್ಲಿ 2 ಎಕರೆ ವಿಸ್ತೀರ್ಣದ ಗುಡ್ಡ ಪ್ರದೇಶವಿದ್ದು, ಮನೆಯಂಗಳದಲ್ಲಿ 60 ಅಡಿ ಬಾವಿ ತೋಡಿಸಿದರು. ಬಾವಿ ಪಕ್ಕ 630 ಅಡಿ ಆಳದ ಬೋರ್‌ವೆಲ್ ತೆಗೆಸಿದರು. ಆದರೂ ನೀರಿನ ಬವಣೆ ನೀಗಲಿಲ್ಲ.
ಭೂತಜ್ಞ ದೇವರಾಜ ರೆಡ್ಡಿ ಸಲಹೆಯಂತೆ ಕೊಳವೆಬಾವಿ ಮರುಪೂರಣ ವ್ಯವಸ್ಥೆ ಅಳವಡಿಸಿಕೊಂಡು ಇದೀಗ ಗುಡ್ಡ ಪ್ರದೇಶದ ಕಡುಬಿಸಿಲಿನ ನಡುವೆಯೂ ತಂಪು ನೀಡುವ ಹಚ್ಚ ಹಸಿರಿನ ತೋಟದ ಮಾಲೀಕರಾಗಿದ್ದಾರೆ. ಸುತ್ತಮುತ್ತಲಿನ ಪರಿಸರದವರು ಕೂಡ ಉತ್ತಮ ನೀರಿನ ಆಶ್ರಯ ಹೊಂದಿದ್ದಾರೆ. ನೀರಿಲ್ಲದ ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಬೇಸಿಗೆ ಕೊನೆಯಲ್ಲಿ 25 ಅಡಿ ನೀರು ತುಂಬಿರುತ್ತದೆ. ಬೋರ್‌ವೆಲ್‌ನಲ್ಲಿ ನೀರು ತುಂಬಿ ತುಳುಕುತ್ತಿದೆ. ಇದರಲ್ಲಿ ಯಶಸ್ಸು ಕಂಡ ಅಶೋಕ್ ಶೆಟ್ಟಿಗಾರ್ ಕಾಳಾವರ ಗ್ರಾಪಂ ವ್ಯಾಪ್ತಿಯ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ಸಮೀಪ ಬೆಳಾರ್ ಬೆಚ್ಚಾಡಿ ಎಂಬಲ್ಲಿ ತಮ್ಮದೇ ತಂತ್ರಜ್ಞಾನದೊಂದಿಗೆ ಕೊಳವೆಬಾವಿ ಮರುಪೂರಣ ಅಳವಡಿಸಿ ಯಶ ಕಂಡಿದ್ದಾರೆ.
ಕೊಳವೆಬಾವಿ ಕೊರೆಯುವ ಸಂದರ್ಭ ಬಂದಿರುವ ಕಲ್ಲಿನ ಪದರಗಳ ವಿವರ, ಆಳ, ಕೇಸಿಂಗ್ ಪೈಪ್ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಇಂಗುಗುಂಡಿ ನಿರ್ಮಿಸಬೇಕಾಗುತ್ತದೆ. ಅಶೋಕ್ ಶೆಟ್ಟಿಗಾರ್ ಅವರ ಒಂದು ಎಕರೆ 25 ಸೆಂಟ್ಸ್ ಗುಡ್ಡ ಪ್ರದೇಶದ ನೀರು ಸಂಗ್ರಹಗೊಳ್ಳಲು 8 ಅಡಿ ಅಗಲ, 6 ಅಡಿ ಉದ್ದ, 10 ಅಡಿ ಆಳದ ಹೊಂಡ ತೆಗೆಯಲಾಗಿದೆ. 280 ಫೀಟ್ ಆಳದ ಕೊಳವೆಬಾವಿಯ ಸುತ್ತಲೂ 26 ಅಡಿ ಉದ್ದ, 10 ಅಡಿ ಅಗಲ, 10 ಅಡಿ ಆಳದ ಇಂಗುಗುಂಡಿ ತೆಗೆದಿದ್ದಾರೆ. ನೀರು ಸಂಗ್ರಹ ಹೊಂಡದಿಂದ ಕೊಳವೆಬಾವಿ ಹೊಂಡಕ್ಕೆ ಪೈಪ್ ಅಳವಡಿಸಲಾಗಿದೆ. ಇನ್ನೊಂದು ಬದಿಯಿಂದ ಗುಡ್ಡದಿಂದ ತೋಡಿನ ಮುಖಾಂತರ ಹರಿದು ಬರುವ ನೀರೂ ಇಂಗುಗುಂಡಿ ಸೇರುವಂತೆ ಪೈಪ್ ಅಳವಡಿಸಲಾಗಿದೆ.
ಕೊಳವೆಬಾವಿ ಪಕ್ಕದ ಹೊಂಡಕ್ಕೆ ಜಲ್ಲಿ ಕಲ್ಲು, ಇದ್ದಿಲು ತುಂಬಿ ಅದರ ಮೇಲೆ ನೈಲಾನ್ ಮೆಷ್ ಹಾಸಲಾಗಿದೆ. ಅದರ ಮೇಲೆ ಜಲ್ಲಿ ಹರಡಿ ಮತ್ತೆ ನೈಲಾನ್ ಮೇಷ್ ಅಳವಡಿಸಲಾಗಿದೆ. ಜಲಮರುಪೂರಣ ಸಾಮಗ್ರಿಗಳನ್ನು ಇಂಗು ಗುಂಡಿಗೆ ತುಂಬಿದ ಮೇಲೆ ಸುತ್ತಲೂ ಕಲ್ಲುಗಳಿಂದ ಗೋಡೆ ನಿರ್ಮಿಸಿ ಕಾಂಕ್ರೀಟ್‌ನಿಂದ ಭದ್ರಗೊಳಿಸಲಾಗಿದೆ. ಇಂಗುಗುಂಡಿಯ ಕೇಸಿಂಗ್ ಪೈಪ್ ಸುತ್ತಲೂ 150 ರಂಧ್ರಗಳನ್ನು ಕೊರೆಯಲಾಗಿದ್ದು, ಕೊಳವೆ ಬಾವಿ ಕೇಸಿಂಗ್ ಪೈಪಿಗೆ ಎರಡು ಹೊದಿಕೆಯ ಪ್ಲಾಸ್ಟಿಕ್ ಮೆಷ್ ಸುತ್ತಿ ಅದಕ್ಕೆ ತಾಮ್ರದ ವಯರ್‌ನಿಂದ ಕಟ್ಟಲಾಗಿದೆ. ಮಳೆ ನೀರನ್ನು ಸೋಸಲು ಸೋಸು ಗುಂಡಿ ನಿರ್ಮಿಸಲಾಗಿದೆ. ಕೇಸಿಂಗ್ ಪೈಪ್‌ಗೆ ನೇರ ಸಂಪರ್ಕವಿರುವದರಿಂದ ನೀರು ಶೀಘ್ರದಲ್ಲಿ ಆಳ ಸೇರಿ ಹೆಚ್ಚು ನೀರು ಅಂತರ್ಜಲಕ್ಕೆ ಸೇರಲು ಅನುಕೂಲವಾಗುತ್ತದೆ.
ಬರ ಪರಿಸ್ಥಿತಿ ಮತ್ತು ಅಂತರ್ಜಲ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆ ಅತ್ಯಗತ್ಯ. ಭೂಮಿಯಲ್ಲಿ ಜಲ ಸಂರಕ್ಷಿಸಿ ಜಲಧಾರೆ ಹರಿದು ಬರುವಲ್ಲಿ ಅಶೋಕ್ ಶೆಟ್ಟಿಗಾರ್ ಮಾದರಿಯಾಗಿದ್ದಾರೆ. ಇಂತಹ ಸಾರ್ವತ್ರಿಕ ಜಾಗೃತಿಯನ್ನು ಆಡಳಿತ ಸಂಸ್ಥೆಗಳು ಕೈಗೊಂಡಲ್ಲಿ ನೀರಿನ ಅಭಾವ ಕಡಿಮೆ ಮಾಡಬಹುದು. ಕೊಳವೆಬಾವಿ ಮರುಪೂರಣ ಕುರಿತು ಹೆಚ್ಚಿನ ಮಾಹಿತಿಗಾಗಿ ಅಶೋಕ ಶೆಟ್ಟಿಗಾರ್-9035137899 ಸಂಪರ್ಕಿಸಬಹುದು.