ಉಪ್ಪಿನಂಗಡಿ ಹಳೇ ಸೇತುವೆ ಕೇಬಲ್ ಕಳವು

cable
ಕಳ್ಳರು ಕಾಂಕ್ರೀಟ್ ತೆಗೆದು ಕೇಬಲ್ ಕದ್ದೊಯ್ದಿರುವುದು.
Published on

ಉಪ್ಪಿನಂಗಡಿ: ಇಲ್ಲಿನ ಕುಮಾರಧಾರಾ ನದಿಗೆ ಆಂಗ್ಲರ ಆಡಳಿತದ ಅವಧಿಯಲ್ಲಿ ನಿರ್ಮಿಸಲಾಗಿದ್ದ ಹಳೇ ಸೇತುವೆಯಲ್ಲಿ ಟೆಲಿಕಾಂ ಸಂಸ್ಥೆಗಳು ಅಳವಡಿಸಿದ್ದ ಕೇಬಲ್‌ಗಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಸೇತುವೆಯ ಇಕ್ಕೆಲಗಳಲ್ಲಿ ಕೇಬಲ್ ಅಳವಡಿಸಿದ್ದ ಟೆಲಿಕಾಂ ಸಂಸ್ಥೆಗಳು, ಅದರ ಸುರಕ್ಷತೆಗಾಗಿ ಸಿಮೆಂಟ್ ಕಾಂಕ್ರೀಟ್ ಹಾಕಿದ್ದವು. ಹೀಗೆ ಅಳವಡಿಸಲಾದ ಕೇಬಲ್‌ಗಳಲ್ಲಿ ತಾಮ್ರದ ಕೇಬಲ್ ಇರುವುದನ್ನು ಕಂಡುಕೊಂಡ ಕಳ್ಳರು ಸಿಮೆಂಟ್ ಕಾಂಕ್ರೀಟ್ ಒಡೆದು ಕೇಬಲ್ ಕಿತ್ತು ಕತ್ತರಿಸಿ ಕದ್ದೊಯ್ದಿದ್ದಾರೆ.

ಬಿಎಸ್‌ಎನ್‌ಎಲ್ ಸಂಸ್ಥೆಯದ್ದು ಎನ್ನಲಾದ ಈ ಕಾಪರ್ ಕೇಬಲ್ ಪ್ರಸಕ್ತ ಬಳಕೆಯಲ್ಲಿ ಇಲ್ಲ. ಬದಲಾದ ತಂತ್ರಜ್ಞಾನದಲ್ಲಿ ಫೈಬರ್ ಕೇಬಲ್ ಬಳಕೆಯಲ್ಲಿರುವ ಕಾರಣ ಹಳೇ ಕಾಪರ್ ಕೇಬಲ್‌ಗಳು ಭೂಮಿಯಲ್ಲಿ ಅಳವಡಿಸಿರುವುದು ಹಾಗೆಯೇ ಉಳಿದಿವೆ. ಇಂತಹ ಕೇಬಲ್‌ಗಳು ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೆ ತೆರವುಗೊಳ್ಳುತ್ತವೆ. ಹೀಗೆ ತೆರವುಗೊಂಡ ಕೇಬಲ್‌ಗಳನ್ನು ಪುನರಪಿ ಸಂಗ್ರಹಿಸುವ ವ್ಯವಸ್ಥೆ ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿ ಇಲ್ಲದ ಕಾರಣ ಕಂಡವರು ಅದನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಲಭಿಸುವ ಕಾಪರ್ ಕೇಬಲ್‌ಗಳ ಲಾಭವನ್ನು ಅರಿತಿರುವ ಮಂದಿ ಉಪ್ಪಿನಂಗಡಿಯ ಕುಮಾರಧಾರಾ ಸೇತುವೆಯಲ್ಲಿ ಅಳವಡಿಸಲಾದ ಕೇಬಲ್‌ಗಳನ್ನು ಕಾಂಕ್ರೀಟ್ ಪಟ್ಟಿಯಿಂದ ಹೊರತೆಗೆದು ಕದ್ದೊಯ್ದಿರುವ ಸಾಧ್ಯತೆ ಇದೆ.

ಸರ್ಕಾರಿ ಸ್ವತ್ತಾಗಿರುವ ಈ ಬೆಲೆಬಾಳುವ ಕಾಪರ್ ಕೇಬಲ್‌ಗಳನ್ನು ರಕ್ಷಿಸುವ ಬಗ್ಗೆ ಬಿಎಸ್‌ಎನ್‌ಎಲ್ ಇಲಾಖೆ ಗಮನ ಹರಿಸಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net