

ಬೆಂಗಳೂರು: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಂದಾಯ ಇಲಾಖೆ ನೌಕರರು, ಗುರುವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಉಪತಹಸೀಲ್ದಾರ್ ಕಚೇರಿ ರಾಜಸ್ವ ನಿರೀಕ್ಷಕರು, ತಾಲೂಕು ಕಚೇರಿ ಸಿಬ್ಬಂದಿ ಪ್ರತಿಭಟನೆಗೆ ಬಾಹ್ಯ ಬೆಂಬಲ ಸೂಚಿಸಿದರು. ಇದರಿಂದಾಗಿ ಗ್ರಾಮ ಪಂಚಾಯಿತಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿ ಸಾರ್ವಜನಕರಿಗೆ ತೊಂದರೆಯಾಯಿತು.
ರಾಜ್ಯದ ಹಲವು ಭಾಗಗಳಲ್ಲಿ ನೌಕರರು ಕೈಗೆ ಕಪ್ಪುಪಟ್ಟಿ ಧರಿಸಿ ತಮ್ಮ ಕಚೇರಿ ಮುಂಭಾಗ ಬೆಳಗ್ಗೆಯಿಂದ ಸಂಜೆವರೆಗೂ ಶಾಂತಿಯುತವಾಗಿ ಧರಣಿ ನಡೆಸಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ಕಡೆ ಧರಣಿ ನಡೆಸಿ ಕೂಡಲೇ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಎರಡು ವರ್ಷದಿಂದ ಸಲ್ಲಿಸಿರುವ 21 ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡುತ್ತಲೇ ಬಂದಿದ್ದೇವೆ. ಸರ್ಕಾರದಿಂದ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. ಗ್ರಾಮಾಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಟೇಬಲ್, ಕುರ್ಚಿ, ಕಪಾಟು, ಗುಣಮಟ್ಟದ ಮೊಬೈಲ್ ಫೋನ್ ಜತೆ ಸಿಮ್ ಹಾಗೂ ಡೇಟಾ, ಗೂಗಲ್ ಕ್ರೋಮ್, ಲ್ಯಾಪ್ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಅಮಾನತು ಆದೇಶಗಳ ರದ್ದಿಗೆ ಒತ್ತಾಯ: ಕಚೇರಿಯಲ್ಲಿ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ ಪ್ರಿಂಟರ್ ಮತ್ತು ಸ್ಕ್ಯಾನರ್ ಜತೆಗೆ ಮೊಬೈಲ್ ತಂತ್ರಾಂಶಗಳ ಕೆಲಸದ ವಿಷಯವಾಗಿ ಈವರೆಗೂ ಆಗಿರುವ ಎಲ್ಲ ಅಮಾನತು ಆದೇಶಗಳನ್ನು ರದ್ದುಪಡಿಸಿ ಹಿಂಪಡೆಯಬೇಕು ಎಂದು ಕೆಲವೆಡೆ ಪ್ರತಿಭಟನಕಾರರು ಒತ್ತಾಯಿಸಿದರು. ಕೆ.ಸಿ.ಎಸ್.ಆರ್ ನಿಯಮಾವಳಿಗಳಂತೆ ಸರ್ಕಾರಿ ರಜೆ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ನೀಡಬಾರದು ಹಾಗೂ ಮೆಮೋ ಹಾಕುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಗ್ರಾಮ ಆಡಳಿತ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿ ಪಡಿಸಬೇಕು. ಸುಸಜ್ಜಿತ ಕಚೇರಿ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಕಾರರು ಮನವಿ ಮಾಡಿದರು.
ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನೀಡಬೇಕು. ಸರ್ಕಾರಿ ರಜೆ ದಿನಗಳಂದು ಮೆಮೊ ಕೊಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂತರ್ ಜಿಲ್ಲಾ ವರ್ಗಾವಣೆ ನಿಯಮ 16(ಎ) ಉಪಖಂಡ (2) ಮರು ಸೇರ್ಪಡೆ ಮಾಡಬೇಕು. ಪತಿ&ಪತ್ನಿ ವರ್ಗಾವಣೆ ಪ್ರಕರಣವನ್ನು ಪರಿಗಣಿಸಬೇಕು. ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನು ಆಹಾರ ನಿರೀಕ್ಷಕ ಹುದ್ದೆಗೆ ಪದೋನ್ನತಿ ನೀಡಬೇಕು. ಪ್ರಯಾಣ ಭತ್ಯೆಯನ್ನು 500 ರೂ.ನಿಂದ 3 ಸಾವಿರ ರೂ.ಹೆಚ್ಚಳ ಮಾಡಬೇಕು. ಕರ್ತವ್ಯದಲ್ಲಿ ಇರುವಾಗಲೇ ನಿಧನರಾದರೆ ಕುಟುಂಬಸ್ಥರಿಗೆ 25 ಲಕ್ಷ ರೂ.ಪರಿಹಾರ ನೀಡಬೇಕು.
| ಶಿವಕುಮಾರ್, ಉಪಾಧ್ಯಕ್ಷ ಕಂದಾಯ ಇಲಾಖೆ ರಾಜ್ಯ ಸಂಘ