

ಬೆಂಗಳೂರು: ಹಣ ಬದಲು 5 ಕೆಜಿ ಅಕ್ಕಿ ನೀಡುವುದು,ಬಾಕಿ ಉಳಿದ ಇಕೆವೈಸಿ ಹಣ ಬಿಡುಗಡೆ ಸೇರಿ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಸರ್ಕಾರ ವಿರುದ್ಧ ಹೋರಾಟದ ರೂಪುರೇಷಗಳನ್ನು ಸಿದ್ಧಪಡಿಸುವ ಸಲುವಾಗಿ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ, ಮಂಗಳವಾರ (ಅ.1) ಬೆಳಗ್ಗೆ 10.30ಕ್ಕೆ ಖಾಸಗಿ ಹೋಟೆಲ್ನಲ್ಲಿ ತುರ್ತು ಸಭೆ ಕರೆದಿದೆ.
ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಕಾರ್ಡ್ದಾರರಿಗೆ ಉಚಿತವಾಗಿ 5 ಕೆಜಿ ಆಹಾರ ಪದಾರ್ಥ ನೀಡಲಾಗುತ್ತಿದೆ. ರಾಜ್ಯವು, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಡಿಬಿಟಿ ಮುಖೇನ ಹಣ ನೀಡುತ್ತಿದ್ದರೂ ಸಮರ್ಪಕವಾಗಿ ಲಾನುಭವಿಗಳಿಗೆ ತಲುಪುತ್ತಿಲ್ಲ. ಆಹಾರ ಇಲಾಖೆ ನಡೆಸಿದ್ದ ಸಮೀಕ್ಷೆಯಲ್ಲಿ ಹಣ ಬದಲು ಅಕ್ಕಿ ಅಥವಾ ದಿನಬಳಕೆ ವಸ್ತು ನೀಡುವಂತೆ ಶೇ.90ರಷ್ಟು ಕಾರ್ಡ್ದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಜಿಗೆ 28 ರೂ.ನಂತೆ ಒಂದು ವರ್ಷದವರೆಗೂ ಅಕ್ಕಿ ನೀಡಲು ಭಾರತೀಯ ಆಹಾರ ನಿಗಮ(ಎಫ್ಸಿಐ) ಒಪ್ಪಿದೆ. ಆದರೂ, ಅಕ್ಕಿ ಖರೀದಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಸಂದ ಅಧ್ಯಕ್ಷ ಟಿ.ಕೃಷ್ಣಪ್ಪ ಹೇಳಿದ್ದಾರೆ.
ರೇಷನ್ ಕಾರ್ಡ್ಗೆ ಆಧಾರ್ ಜೋಡಣೆ(ಇಕೆವೈಸಿ) ಮಾಡಿದ್ದಕ್ಕಾಗಿ ಅಂಗಡಿ ಮಾಲೀಕರಿಗೆ ನೀಡಬೇಕಿದ್ದ ಕಮಿಷನ್ ಹಣವನ್ನು 7 ವರ್ಷಗಳಿಂದ ಕೊಟ್ಟಿಲ್ಲ. ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದರೆ ಅವರು ಉಡಾಫೆ ಹೇಳಿಕೆ ಕೊಡುತ್ತಿದ್ದಾರೆ.ಆದಾಯ ಪ್ರಮಾಣ ಪತ್ರದ ಆಧಾರದಲ್ಲಿ ಕಾರ್ಡ್ ರದ್ದತಿಗೆ ಆಹಾರ ಇಲಾಖೆ ಮುಂದಾಗಿದೆ. ಈ ಎಲ್ಲ ಸಮಸ್ಯೆ ಬೆಗಹರಿಸಲು ಸಭೆ ಕರೆಯಲಾಗಿದೆ ಎಂದು ಸಂಘದ ಅಧ್ಯಕ್ಷರು ವಿವರಿಸಿದರು.