ಟೋಲ್ ರಿಯಾಯಿತಿಗೆ ಆಗ್ರಹಿಸಿ ಮನವಿ

toll-1
ಶಿರೂರು ಸ್ಥಳೀಯರಿಗೆ ಟೋಲ್ ರಿಯಾಯಿತಿಗೆ ಆಗ್ರಹಿಸಿ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ಗುರುವಾರ ಮನವಿ ನೀಡಲಾಯಿತು
Published on

ಶಿರೂರು: ಶಿರೂರು ಟೋಲ್‌ಗೇಟ್‌ನಲ್ಲಿ ಸ್ಥಳೀಯರಿಗೆ ಈ ಹಿಂದೆ ನೀಡುತ್ತಿರುವ ಟೋಲ್ ರಿಯಾಯಿತಿ ಮುಂದುವರಿಸಬೇಕೆಂದು ಆಗ್ರಹಿಸಿ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ಗುರುವಾರ ಮನವಿ ನೀಡಲಾಯಿತು.

ಟೋಲ್ ಆರಂಭಿಸುವ ವೇಳೆ ಜಿಲ್ಲಾಧಿಕಾರಿಗಳ ಸಮಾಕ್ಷಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ಸಭೆ ನಡೆಸಿ ಶಿರೂರಿನ 5 ಕಿ.ಮೀ ವ್ಯಾಪ್ತಿಯ ವಾಹನಗಳಿಗೆ ಟೋಲ್ ರಿಯಾಯಿತಿ ನೀಡಲು ನಿರ್ಧರಿಸಲಾಗಿತ್ತು. ಆದರೆ ಕಳೆದೊಂದು ವಾರದಿಂದ ಶಿರೂರಿನ ಸ್ಥಳೀಯ ವಾಹನಗಳಿಗೆ ತಿಂಗಳ ಪಾಸ್ ಮಾಡಲು ಸಿಬ್ಬಂದಿ ತಿಳಿಸಿರುವ ಕಾರಣ ಹೋರಾಟ ಸಮಿತಿ ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಈಗಾಗಲೆ ಸಾಸ್ತಾನ ಮತ್ತು ಹೆಜಮಾಡಿಯಲ್ಲಿ ಈ ಕುರಿತು ಹೋರಾಟ ಆರಂಭವಾಗಿದ್ದು, ಶಿರೂರಿನಲ್ಲಿ ಯಾವುದೇ ಕಾರಣಕ್ಕೂ ಟೋಲ್ ರಿಯಾಯಿತಿ ಹಿಂಪಡೆಯಬಾರದು ಮತ್ತು ಈ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಿ ನಿರ್ಧಾರ ತೆಗೆದುಕೊಳ್ಳಬೇಕು. ಒಂದೊಮ್ಮೆ ಏಕಾಏಕಿ ನಿರ್ಣಯ ಕೈಗೊಂಡರೆ ಸಾರ್ವಜನಿಕ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಬೀದಿ ದೀಪ, ಸರ್ವೀಸ್ ರಸ್ತೆ, ಸೂಚನಾ ಫಲಕ, ಬಸ್ ನಿಲ್ದಾಣ ಬೇಡಿಕೆ, ಬಪ್ಪನಬೈಲು ಭಾಗದಲ್ಲಿ ನೀಡಿದ ಭರವಸೆ ಈಡೇರಿಸುವುದು, ಸಾರ್ವಜನಿಕರು ಮತ್ತು ಸ್ಥಳೀಯರ ಜತೆ ಟೋಲ್ ಸಿಬ್ಬಂದಿ ಸೌಜನ್ಯದಿಂದ ವರ್ತಿಸುವುದು ಪಂಚಾಯಿತಿ ಮನವಿಗಳಿಗೆ ಸ್ಪಂದಿಸುವ ಕುರಿತು ಮನವಿ ನೀಡಲಾಯಿತು. ಹಾಗೂ ಒಂದು ತಿಂಗಳ ಅವಧಿಯೊಳಗೆ ಈ ಸಮಸ್ಯೆಗೆ ಪರಿಹಾರ ನೀಡಲು ತಿಳಿಸಲಾಯಿತು. ಐ.ಆರ್.ಬಿ ಟೋಲ್ ವ್ಯವಸ್ಥಾಪಕ ರಾಜನ್ ನಾಯರ್ ಮನವಿ ಸ್ವೀಕರಿಸಿದರು.

ಶಿರೂರಿನ ವಿವಿಧ ಪ್ರಮುಖರು, ಗ್ರಾಪಂ ಉಪಾಧ್ಯಕ್ಷರು, ಗ್ರಾಪಂ ಸದಸ್ಯರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆ ಪ್ರತಿನಿಧಿಗಳು, ಆರಕ್ಷಕ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net