

ವಿಜಯವಾಣಿ ಸುದ್ದಿಜಾಲ ಉಡುಪಿ
ಕರ್ನಾಟಕ ವಿಧಾನ ಪರಿಷತ್ನ ನೈಋತ್ಯ ಪದವೀಧರ/ಶಿಕ್ಷಕರ ಕ್ಷೇತ್ರಕ್ಕೆ ಜೂ.3ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಮಾನ್ಯತೆ ಪಡೆದ ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿ ಕಚೇರಿಯಿಂದಲೇ ಮತದಾರರ ಪಟ್ಟಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾಹಿತಿ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಚುನಾವಣೆಗೆ ಸಂಬಂಧಿಸಿದ ಭಾವಚಿತ್ರ ರಹಿತ ಮತದಾರರ ಪಟ್ಟಿಯನ್ನು ಜಿಲ್ಲೆಯ ವೆಬ್ಸೈಟ್ https://Udupi.nic.in ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಪದವೀಧರ ಕ್ಷೇತ್ರದಲ್ಲಿ 7,857 ಪುರುಷ, 9,176 ಮಹಿಳಾ ಮತದಾರರು ಸೇರಿ ಒಟ್ಟು 17,033 ಮತದಾರರಿದ್ದಾರೆ. ಶಿಕ್ಷಕರ ಕ್ಷೇತ್ರದಲ್ಲಿ 1,717 ಪುರುಷ, 2,350 ಮಹಿಳಾ ಮತದಾರರು ಸೇರಿ ಒಟ್ಟು 4,067 ಮತದಾರರಿದ್ದಾರೆ ಎಂದರು.
ಸರ್ಕಾರಿ ಹಾಗೂ ಶಾಲಾ-ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾ ಸಂಸ್ಥೆಗಳು, ಎಲ್ಲ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿ, ಕಾರ್ಖಾನೆ, ಕೈಗಾರಿಕಾ ಸಂಸ್ಥೆ, ರಾಷ್ಟ್ರೀಕೃತ ಬ್ಯಾಂಕ್ಗಳು, ಔದ್ಯಮಿಕ ಹಾಗೂ ಇತರ ಸಂಸ್ಥೆಗಳಲ್ಲಿ ಕಾಯಂ ಆಗಿ ಅಥವಾ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುವ ಪದವೀಧರರು/ಶಿಕ್ಷಕರುಗಳಿಗೆ ಮತದಾನ ಮಾಡಲು ಸರ್ಕಾರ ಜೂ.3ರಂದು ವಿಶೇಷ ಸಾಂದರ್ಭಿಕ ರಜೆ ಘೋಷಿಸಿದೆ ಎಂದು ತಿಳಿಸಿದರು.
ಪದವೀಧರ/ನೈಋತ್ಯ ಕ್ಷೇತ್ರದ ಚುನಾವಣೆಯ ಮತದಾನಕ್ಕಾಗಿ ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು, ಕಾರ್ಕಳ ಹಾಗೂ ಹೆಬ್ರಿ ಸೇರಿ ಒಟ್ಟು 7 ತಾಲೂಕುಗಳಲ್ಲಿ ಮತ ಕೇಂದ್ರ ತೆರೆಯಾಲಾಗುತ್ತಿದೆ. ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿ 19 ಮತಗಟ್ಟೆ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 10 ಮತಗಟ್ಟೆ ತೆರೆಯಲಾಗುತ್ತಿದೆ. ಈ ಎರಡೂ ಕ್ಷೇತ್ರಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಿರುವ ಬಗ್ಗೆ ತಾಲೂಕು ಕಚೇರಿಯಲ್ಲಿ ಪರಿಶೀಲಿಸಬಹುದು ಎಂದರು.
ಮತದಾರರನ್ನು ಗುರುತಿಸಲು ಅವರ ಭಾವಚಿತ್ರವುಳ್ಳ ಚೀಟಿ (ಎಪಿಕ್)ಯನ್ನು ಮುಖ್ಯ ದಾಖಲಾತಿಯಾಗಿ ತೋರಿಸಬೇಕಿದೆ. ಮತದಾರರ ಪಟ್ಟಿಯಲ್ಲಿ ಹೆಸರಿದ್ದೂ ಎಪಿಕ್ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಅಂತಹವರು ಭಾವಚಿತ್ರವುಳ್ಳ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಇಂಡಿಯನ್ ಪಾಸ್ಪೋರ್ಟ್, ರಾಜ್ಯ-ಕೇಂದ್ರ ಸರ್ಕಾರಿ ನೌಕರರಾಗಿದ್ದಲ್ಲಿ ಸೇವೆಯ ಗುರುತಿನ ಕಾರ್ಡ್, ಶಿಕ್ಷಣ ಸಂಸ್ಥೆಯ ಮಾನ್ಯತೆ ಕಾರ್ಡ್, ಪದವಿ/ಡಿಪ್ಲೊಮಾ ಪ್ರಮಾಣಪತ್ರ, ಅಂಗವೈಕಲ್ಯ ಪತ್ರ, ಯುಡಿಐಡಿ ಕಾರ್ಡ್ಗಳನ್ನೂ ಸಹ ಮತದಾನಕ್ಕೆ ಬರುವಾಗ ತರಬಹುದು ಎಂದರು.
ಕ್ಷೇತ್ರ ಪುರುಷ ಮಹಿಳೆ ಒಟ್ಟು
ಬೈಂದೂರು 419 316 735
ಕುಂದಾಪುರ 1,132 1,028 2,160
ಬ್ರಹ್ಮಾವರ 2,705 3,179 3,146
ಉಡುಪಿ 1,795 2,348 4,143
ಕಾಪು 634 950 1,584
ಕಾರ್ಕಳ 755 961 1,716
ಹೆಬ್ರಿ 236 192 428
ಒಟ್ಟು 7,857 9,176 17,033
ಕ್ಷೇತ್ರ ಪುರುಷ ಮಹಿಳೆ ಒಟ್ಟು
ಬೈಂದೂರು 143 93 236
ಕುಂದಾಪುರ 368 446 814
ಬ್ರಹ್ಮಾವರ 322 417 739
ಉಡುಪಿ 433 745 1,178
ಕಾಪು 90 190 280
ಕಾರ್ಕಳ 285 392 677
ಹೆಬ್ರಿ 76 67 143
ಒಟ್ಟು 1,717 2,350 4,067
ಓರ್ವ ಮತದಾರರ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳಿಗೂ ಮತ ಚಲಾಯಿಸಬಹುದು. ಅಭ್ಯರ್ಥಿಗಳ ಭಾವಚಿತ್ರದ ಮುಂದೆ ಪ್ರಥಮ ಪ್ರಾಶಸ್ತ್ಯದ ಮತವಾಗಿ 1 ಎಂದು ನಮೂದಿಸಬೇಕು. ನಂತರ ಅವರ ಆದ್ಯತೆಯ ಅಭ್ಯರ್ಥಿಗೆ ಮುಂದಿನ ನಂಬರ್ ಹಾಕುತ್ತ ಹೋಗಬೇಕು. ಒಂದೇ ಅಭ್ಯರ್ಥಿಗೂ ಮತ ಹಾಕಿ ಉಳಿದವರನ್ನು ಬಿಡಬಹುದು. 5 ಅಭ್ಯರ್ಥಿಗೆ ಮತ ಹಾಕುವುದಿದ್ದರೆ ಅವರ ಭಾವಚಿತ್ರದ ಮುಂದೆ ಅನುಕ್ರಮವಾಗಿ ನಂಬರ್ ನಮೂದಿಸಬೇಕು. ಇಲ್ಲದಿದ್ದಲ್ಲಿ ಮತ ಲ್ಯಾಪ್ಸ್ ಆಗುತ್ತದೆ. ಇಂಗ್ಲಿಷ್, ಕನ್ನಡ, ರೋಮನ್ ಹಾಗೂ ಸಂಸ್ಕೃತದ ನಂಬರ್ (ಯಾವುದಾದರೂ ಒಂದು) ಬಳಕೆ ಮಾಡಬಹುದು. ಡಾ.ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ