ಬಸ್ ನಿಲ್ದಾಣಕ್ಕಿಲ್ಲ ಉದ್ಘಾಟನೆ ಭಾಗ್ಯ, ಎರಡು ಬಾರಿ ಗುದ್ದಲಿ ಪೂಜೆ ಶೀಘ್ರ ಪೂರ್ಣಗಳಿಸಲು ಮನವಿ

busstop
ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲದ ಯಡ್ತರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಏಳು ವರ್ಷದ ಹಿಂದೆ ಸಮಿಶ್ರ ಸರ್ಕಾರದ ಸಾರಿಗೆ ಸಚಿವ ಡಿ.ಸಿ.ತಮ್ಮಯ್ಯ ಅವರಿಂದ ಶಂಕುಸ್ಥಾಪನೆಗೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವತಿಯಿಂದ ಯಡ್ತರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಇಲ್ಲ.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಡಿಪೋಗಾಗಿ ನಿರ್ಮಾಣಕ್ಕೆ ಸ್ಥಳ ವೀಕ್ಷಣೆಗಾಗಿ ಮಂಗಳೂರು ವಿಭಾಗದ ಅಂದಿನ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗ್ಡೆ ಹಾಗೂ ಮೆಕಾನಿಕ್ ವಿಭಾಗದ ಬಸವರಾಜ್ 2017 ಫೆ.3ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ರಾಜ್ಯ ರಸ್ತೆ ಸಾರಿಗೆ ನಿಗಮ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಇಲಾಖೆ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಶೀಘ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಡಿಪೋ ನಿರ್ಮಾಣ ಮಾಡುವ ಕುರಿತು ಚರ್ಚಿಸಿ ತೀರ್ಮಾನಿಸುವುದಾಗಿ ಹಾಗೂ ಬೈಂದೂರಿನಲ್ಲಿ ಕಂಟ್ರೋಲ್ ಪಾಯಿಂಟ್ ಆರಂಭಿಸುವ ಬಗ್ಗೆ ಮಾಹಿತಿ ನೀಡಿದ್ದರು. ಈ ಕುರಿತು 2018 ಜ.25ರಂದು ‘ವಿಜಯವಾಣಿ’ ಸಚಿತ್ರ ವರದಿ ಮಾಡಿದ್ದು, ಶಾಸಕರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ನಂತರ 2018ಮಾ.3 22ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್ ಶಂಕುಸ್ಥಾಪನೆ ಮಾಡಿದ್ದರು. ಗ್ರಾಮೀಣ ಮತ್ತು ನಗರ ಭಾಗಗಳಿಗೆ ಹೆಚ್ಚು ಬಸ್‌ಗಳನ್ನು ಒದಗಿಸಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂದು ಉಡುಪಿಯಲ್ಲಿ 34 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ಹಾಗೂ 6 ಕೋಟಿ ರೂ. ವೆಚ್ಚದಲ್ಲಿ ಡಿಪೋ, ಬೈಂದೂರಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ಹಾಗೂ 6 ಕೋಟಿ ರೂ. ವೆಚ್ಚದಲ್ಲಿ ಡಿಪೋ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು.

ನಿಧಾನಗತಿಯಲ್ಲಿ ಕಾಮಗಾರಿ

ನಂತರ ಬದಲಾದ ಸರ್ಕಾರದ ಶಾಸಕರಾಗಿ ಆಯ್ಕೆಯಾದ ಬಿ.ಎಂ.ಸುಕುಮಾರ ಶೆಟ್ಟಿ ಇನ್ನೊಮ್ಮೆ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಕೊಲ್ಲೂರು ದೇವಸ್ಥಾನ ಹೋಗುವ ಭಕ್ತರಿಗೆ ವರದಾನ ಎಂದೇ ಹೇಳಬಹುದಾದ ಯಡ್ತರೆ ಬಳಿ ನಿರ್ಮಿಸಲಾದ ಈ ರಾಜ್ಯ ರಸ್ತೆ ಸಾರಿಗೆ ನಿಲ್ದಾಣ ಎರಡು ಬಾರಿ ಶಂಕುಸ್ಥಾಪನೆಗೊಂಡಿದ್ದರೂ ಕೂಡ ಇನ್ನೂ ಮುಕ್ತಾಯದ ಹಂತಕ್ಕೆ ಬರದೇ ಅನಾಥವಾಗಿ ನಿಂತಿದೆ. ಈ ಮೊದಲು ಇಲ್ಲಿರುವ ಕೆರೆಯನ್ನು ತುಂಬಿದ ಕಾರಣ ಕುಸಿಯಬಹುದೆಂಬ ಭೀತಿಯಿಂದ ನಿಧಾನ ಕಾಮಗಾರಿ ನಡೆಯುತ್ತಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಕಾಮಗಾರಿ ಆರಂಭಿಸಿ ಏಳು ಮಳೆಗಾಲ ಕಳೆದರೂ ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಉಡುಪಿಯ ನಿಲ್ದಾಣ ಈಗಾಗಲೇ ಉದ್ಘಾಟನೆಗೊಂಡು ಕಾರ್ಯಾಚರಿಸುತ್ತಿದೆ.

ಅನೈತಿಕ ಚಟುವಟಿಕೆಗಳ ತಾಣ

ಈ ಬಸ್ ನಿಲ್ದಾಣದ ನೆಲದ ಕಾಂಕ್ರೀಟ್ ಕಾಮಗಾರಿಗೆ ಅನುದಾನ ಮಂಜೂರು ಆಗದೆ ಬಿಕೋ ಎನ್ನುತ್ತಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಈ ಬಗ್ಗೆ ಸ್ಥಳೀಯ ಜನನಾಯಕರು ಮೂಕಪ್ರೇಕ್ಷಕರಾಗಿದ್ದಾರೆ. ಮಂಗಳೂರು- ಗೋವಾ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಬೈಂದೂರು ಯಡ್ತರೆ ಬೈಪಾಸ್ ಬಳಿಯ ಈ ನಿಲ್ದಾಣ ಪ್ರಯಾಣಿಕರಿಗೆ ಅತಿ ಅಗತ್ಯವಾದ ನಿಲ್ದಾಣವಾಗಿದ್ದು, ಸರ್ಕಾರ ಉಳಿದ ಕಾಮಗಾರಿಗಳಿಗೆ ಬೇಕಾಗಿರುವ ಅನುದಾನ ಶೀಘ್ರವಾಗಿ ಬಿಡುಗಡೆಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.

ಬಸ್ ನಿಲ್ದಾಣ ಉಳಿದ ಕಾಮಗಾರಿಗೆ ಈಗಾಗಲೇ ಅನುದಾನ ಮಂಜೂರಾಗಿದ್ದು, ಟೆಂಡರ್ ಕೂಡ ಆಗಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಇಲಾಖೆ ಮಾಹಿತಿ ಇದೆ. ನೀತಿ ಸಂಹಿತೆ ಮುಗಿದ ನಂತರ ಇಲಾಖೆ ಕೆಲಸ ಆರಂಭಿಸದೇ ಕತೆ ಹೇಳುತ್ತಾ ಕುಳಿತರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಇದಕ್ಕೆ ಅವಕಾಶ ಕೊಡದೇ ತಕ್ಷಣ ಬಸ್ ನಿಲ್ದಾಣದ ಉಳಿದ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು. -ಗುರುರಾಜ್ ಗಂಟಿಹೊಳೆ, ಶಾಸಕರು ಬೈಂದೂರು

ಇಲ್ಲಿಯ ತನಕ ಸುಮಾರು 8 ಕೋಟಿ ರೂ.ಗೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಈ ಅಪೂರ್ಣ ಸುಂದರ ನಿಲ್ದಾಣದ ಬಗ್ಗೆ ಶಾಸಕರು ಮತ್ತು ಸಾರಿಗೆ ಸಚಿವರು ಕೂಡಲೇ ಗಮನಿಸಿ ಅನುದಾನ ಮಂಜೂರು ಮಾಡಿಸಿ ಉಳಿದ ಕಾಮಗಾರಿ ಕೂಡಲೇ ಪ್ರಾರಂಭಿಸುವಂತೆ ಒತ್ತಡ ಹೇರಬೇಕು.-ಮಂಜುನಾಥ, ಸ್ಥಳೀಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net