ವರದಿಗಾರನ ನಿಗೂಢ ಆತ್ಮಹತ್ಯೆ: ನೇಣು ಬಿಗಿದುಕೊಳ್ಳಲು ಕಾರಣವಾದರೂ ಏನಿತ್ತು..?

Reporter
Published on

ಬೇತಮಂಗಲ: ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಪೊಲೀಸ್ ವಿಚಾರಣೆಗೆ ಒಳಪಟ್ಟಿದ್ದ ಕೆಜಿಎಫ್​ನ ಯೂಟ್ಯೂಬ್ ನ್ಯೂಸ್ ಚಾನಲ್‌ನ ವರದಿಗಾರ ಶ್ರೀಧರ್ (40) ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಮ್ಮಸಂದ್ರದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮ್ಯಾನೇಜರ್ ಆಗಿದ್ದ ಮೀನಾದೇವಿ (45) ಎಂಬುವವರು ಏ. 23ರಂದು ಭಾರತ್ ನಗರದಲ್ಲಿ ವಾಸಿಸುತ್ತಿದ್ದ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡ ಬೆಮೆಲ್ ನಗರ ಪೊಲೀಸರು ತನಿಖೆ ನಡೆಸಿ ಕೊಲೆಯೆಂದು ಅನುಮಾನ ಬಂದಾಗ ಊರಿಗಾಂ ವೃತ್ತ ನಿರೀಕ್ಷಕರಿಗೆ ಪ್ರಕರಣ ವರ್ಗಾಯಿಸಿದ್ದರು. ಪ್ರಕರಣದ ತನಿಖೆ ಆರಂಭಿಸಿದ್ದ ವೃತ್ತ ನಿರೀಕ್ಷಕ ವೆಂಕಟರಮಣಪ್ಪ ನೇತೃತ್ವದ ತಂಡಕ್ಕೆ ಶ್ರೀಧರ್ ಮತ್ತು ಮೀನಾದೇವಿ ನಡುವೆ ಅಕ್ರಮ ಸಂಬಂಧ ಇದ್ದ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಿದಾಗ ಶ್ರೀಧರ್ ಮತ್ತು ಮೀನಾದೇವಿ ಮೊಬೈಲ್‌ಫೋನ್​ನಲ್ಲಿ ಚಾಟಿಂಗ್ ನಡೆಸಿರುವ ಬಗ್ಗೆ ದಾಖಲೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಶ್ರೀಧರ್ ಅವರನ್ನು ವೆಂಕಟರಮಣಪ್ಪ ಜೂ. 19ರಂದು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದರು.

ವಿಷಯ ತಿಳಿದ ಸ್ನೇಹಿತ ಹಿರಿಯ ಅಧಿಕಾರಿಗಳ ಒಪ್ಪಿಗೆ ಪಡೆದು ಭಾನುವಾರ ಶ್ರೀಧರ್ ಅವರನ್ನು ಠಾಣೆಯಿಂದ ಕರೆತಂದಿದ್ದರು. ಆದರೆ ಶ್ರೀಧರ್ ಮನೆಗೆ ಹೋಗದೆ ನೇರವಾಗಿ ಕುವೆಂಪು ಬಸ್ ನಿಲ್ದಾಣದ ಬಳಿ ಇರುವ ಕಚೇರಿಗೆ ತೆರಳಿ ‘‘ನಾನು ನಿರಪರಾಧಿ, ಜೀವನದಲ್ಲಿ ಯಾವುದೇ ತಪ್ಪು ಮಾಡಿಲ್ಲ, ನನ್ನ ಮೇಲೆ ಕ್ರಿಮಿನಲ್ ಎಂದು ಕಪ್ಪುಚುಕ್ಕೆ ಬರೆಯಲು ಸಂಚು ನಡೆದಿದೆ. ನಾನು ಮಾನಸಿಕವಾಗಿ ನೊಂದು ಸಾಯುತ್ತಿದ್ದೇನೆ’’ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net