ಧರ್ಮದ ಚೌಕಟ್ಟಿನಿಂದ ಮಾನವ ಮಾಧವ : ಶ್ರೀಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಪಾದರು ಅಭಿಪ್ರಾಯ

8
Published on

ಬದಿಯಡ್ಕ: ಜಗತ್ತಿನ ಜೀವಜಾಲಗಳಲ್ಲಿ ಎಲ್ಲವೂ ಸಮಾನವಾಗಿದ್ದರೂ ಧರ್ಮಾಧಿಷ್ಟಿತ ಜೀವನ ನಡೆಸುವ ಒಂದಂಶದ ಹೆಚ್ಚುಗಾರಿಕೆಯಿಂದ ಮನುಷ್ಯ ಶ್ರೇಷ್ಠನಾಗಿ ಗುರುತಿಸಲ್ಪಡುತ್ತಿದ್ದಾನೆ. ಧರ್ಮದ ಚೌಕಟ್ಟು ಮಾನವನನ್ನು ಮಾಧವನನ್ನಾಗುಸುತ್ತದೆ ಎಂದು ಸಂಪುಟ ಶ್ರೀಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.

ನೀರ್ಚಾಲು ಮಾನ್ಯ ಸಮೀಪ ಕಾರ್ಮಾರು ಮಹಾವಿಷ್ಣು ದೇವಾಲಯದ ಪುನಃಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಸೋಮವಾರ ಸಂಜೆ ಶ್ರೀಕ್ಷೇತ್ರದ ಯುವ ಸಂಗಮದಲ್ಲಿ ಆಶೀರ್ವಚನ ನೀಡಿದರು.

ಕಾರ್ಮಾರು ಶ್ರೀಮಹಾವಿಷ್ಣು ಯುವಕ ವೃಂದ ಅಧ್ಯಕ್ಷ ವಿಜಯಕುಮಾರ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು.ಕೊಲ್ಲೂರು ಶ್ರೀಮೂಕಾಂಬಿಕಾ ದೇವಾಲಯ ಟ್ರಸ್ಟ್ ಸದಸ್ಯ ಅಭಿಲಾಷ್ ಪಿ.ವಿ. ಉದ್ಘಾಟಿಸಿ, ಯುವಶಕ್ತಿಗೆ ಬೆಂಬಲವಾಗಿ ಆಧ್ಯಾತ್ಮಿಕತೆ, ಧಾರ್ಮಿಕತೆ ಬಲ ನೀಡುತ್ತದೆ. ಕಾಂತಿಯುತವಾದ ಯುವತ್ವ ಆಧ್ಯಾತ್ಮದ ಬೆಂಬಲದಲ್ಲಿ ಬೆಳಗುತ್ತದೆ ಎಂದರು.

ಖ್ಯಾತ ವಾಗ್ಮಿ ಆದರ್ಶ ಗೋಖಲೆ ಮಾತನಾಡಿ, ಭಕ್ತಿಯ ಶಕ್ತಿ ಅಪೂರ್ವವಾಗಿದ್ದು, ಭಗವಂತನ ಸಾಕ್ಷಾತ್ಕಾರ ಭಕ್ತಿಯಿಂದ ಸಾಧ್ಯ. ನರನೊಡನೆ ಭಕ್ತಿ ಸೇರಿಕೊಂಡಾಗ ನಾರಾಯಣನಾಗಬಲ್ಲ. ನಮ್ಮ ಮಕ್ಕಳನ್ನೇ ಆಸ್ತಿಯಾಗಿಸಬೇಕೆ ವಿನಃ ಲೌಕಿಕ ಸಂಪತ್ತಿನ ಲಾಲಸೆಗೊಳಗಾಗಿ ಪ್ರಯೋಜನವಿಲ್ಲ ಎಂದು ಕರೆ ನೀಡಿದರು. ನಾರಾಯಣ ಆಸ್ರ ಉಳಿಯ, ಡ್ರಾಮಾ ಜೂನಿಯರ್ ಕಲಾವಿದ ಅನೂಪ್ ರಮಣ ಶರ್ಮಾ ಮುಳ್ಳೇರಿಯ ಮಾತನಾಡಿದರು.

ಶ್ರೀಕ್ಷೇತ್ರದ ಟ್ರಸ್ಟಿ ನವೀನ್ ಚಂದ್ರ ಪಿ.ಕೆ., ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮಧುಸೂದನ ಆಯರ್ ಮಂಗಳೂರು, ಗಲ್ಫ್ ಸಮಿತಿ ಸಂಚಾಲಕ ಶಶಿಧರ ಚೇಡಿಕ್ಕಾನ, ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಮಾನ್ಯ ಜ್ಞಾನೋದಯ ಶಾಲಾ ಪ್ರಬಂಧಕ ನಿತ್ಯಾನಂದ ಆರ್.ಮಾನ್ಯ, ರಾಜ್ಯ ಬ್ಯಾಡ್ಮಿಂಟನ್ ತಂಡದ ಕ್ರೀಡಾಳು ಸಿದ್ಧಾರ್ಥ್ ಏಣಿಯರ್ಪು ಉಪಸ್ಥಿತರಿದ್ದರು. ಯುವಕ ವೃಂದ ಪ್ರಧಾನ ಕಾರ್ಯದರ್ಶಿ ಗೋಕುಲ ಶರ್ಮಾ ಕಾರ್ಮಾರು ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ರಂಜಿತ್ ಯಾದವ್ ಎ.ಎಸ್. ವಂದಿಸಿದರು. ಡಾ.ಶ್ರೀಶ ಕುಮಾರ ಪಂಜಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಧರಣಿ ಸರಳಿ ಪ್ರಾರ್ಥನೆಗೈದರು. ಮುಳ್ಳೇರಿಯದ ಅಮ್ಮ ತಿರುವಾದಿರ ತಂಡದವರಿಂದ ತಿರುವಾದಿರ ನೃತ್ಯ, ಮಾನ್ಯದ ಅನುಷಾ ಶಿಷ್ಯರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net