

ವಿಜಯವಾಣಿ ಸುದ್ದಿಜಾಲ ಗುರುಪುರ
ಸರ್ಕಾರಿ ಅನುದಾನದ ಕೊರತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸರ್ಕಾರ ಮೇಲೆ ಒತ್ತಡ ತಂದು ಅಭಿವೃದ್ಧಿ ಕೆಲಸಗಳಿಗೆ ಅನುದಾನ ತರುವ ಕೆಲಸವಾಗಬೇಕು. ಶಾಸಕನಾಗಿದ್ದ ಹಿಂದಿನ ಅವಧಿಯಲ್ಲಿ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋಟ್ಯಂತರ ರೂ. ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಳೂರು ಮಠದಗುಡ್ಡೆಯಲ್ಲಿ ಸಿ.ಎಂ. ಗ್ರಾಮ ವಿಕಾಸ ಯೋಜನೆ ಮತ್ತು ತಾಲೂಕು ಪಂಚಾಯಿತಿಯ ಅನುದಾನದಲ್ಲಿ ನಿರ್ಮಿಸಲಾದ ಸಮುದಾಯ ಭವನವನ್ನು ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಮಾತನಾಡಿ, 1992-93ರ ಅವಧಿಯಲ್ಲಿ ಸಂವಿಧಾನಕ್ಕೆ ತರಲಾದ ಮಹತ್ವದ ತಿದ್ದುಪಡಿ ಮೂಲಕ ಅಧಿಕಾರ ವಿಕೇಂದ್ರೀಕರಣ ಸಾಧ್ಯವಾಗಿದೆ. ಪಂಚಾಯತ್ರಾಜ್ ಕಾಯ್ದೆಯ ಅಧಿನಿಯಮದನ್ವಯ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ಸಿಕ್ಕಿದ್ದು, ಸಮುದಾಯಗಳು ಬಲಯುತಗೊಳ್ಳುತ್ತಿವೆ. ಈ ಭವನದಿಂದ ಸಮುದಾಯಕ್ಕೆ ಹೆಚ್ಚು ಪ್ರಯೋಜನವಾಗಲಿ ಎಂದರು.
ಗುರುಪುರ ಗ್ರಾಪಂ ಅಧ್ಯಕ್ಷೆ ಸಫರಾ ಮದಕ ಮಾತನಾಡಿದರು. ಪಂಚಾಯಿತಿ ಉಪಾಧ್ಯಕ್ಷ ದಾವೂದ್ ಬಂಗ್ಲೆಗುಡ್ಡೆ, ಹಿರಿಯ ನಾಗರಿಕರಾದ ಡೊಂಬಯ್ಯ, ಶೀನ, ರಾಮ ಮುಖಾರಿ, ಪಂಚಾಯಿತಿ ಸದಸ್ಯರು, ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು. ಗುರುಪುರ ಪಿಡಿಒ ಪಂಕಜಾ ನಿರೂಪಿಸಿದರು.
ಎಸ್ಸಿ, ಎಸ್ಟಿಗಳಿಗೆ ಯಾವುದೇ ತೊಂದರೆಯಾಗಬಾರದು ಎಂಬುದು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಕನಸಾಗಿತ್ತು. ಅವರ ಕನಸು ಇನ್ನೂ ನನಸಾಗಿಲ್ಲ. ಅವರು ರೂಪಿಸಿದ ಕಾಯ್ದೆಗಳು ಸರಿಯಾಗಿ ಪಾಲನೆಯಾಗದೆ, ಮೀಸಲಾತಿ ಲಾಭ ಅಷ್ಟಕಷ್ಟೇ ಇದೆ. ಶಿಕ್ಷಣ, ರಾಜಕೀಯ ಮಟ್ಟದಲ್ಲಿ ಅವರ ಕನಸು ಅನುಷ್ಠಾನಗೊಳ್ಳಬೇಕು. ಸಫರಾ ಮದಕ, ಅಧ್ಯಕ್ಷರು, ಗುರುಪುರ ಗ್ರಾಮ ಪಂಚಾಯಿತಿ https://www.vijayavani.net/handing-over-of-agricultural-machinery https://www.vijayavani.net/mangalore-kavoor-bramma-kalasha-dharmika-sabe-p-s-prakash