

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಜಿಲ್ಲೆಯಲ್ಲಿ ಸುರಿಯುತ್ತಿರುವ ಬೇಸಿಗೆ ಮಳೆ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿವಾರಣಾ ಪ್ರಾಧಿಕಾರ ಕೆಲವೊಂದು ಮಾರ್ಗಸೂಚಿ ಹೊರಡಿಸಿದೆ.
ಗಾಳಿ ಅಥವಾ ಮಳೆಗೆ ಮರಗಳ ಕೆಳಗೆ ನಿಲ್ಲುವುದು, ಮರಗಳ ಕೆಳಗೆ ವಾಹನ ನಿಲ್ಲಿಸುವುದು ಮಾಡಬಾರದು. ಮನೆಯ ಅಂಗಳದಲ್ಲಿರುವ ಮರಗಳ ಅಪಾಯಕಾರಿ ಕೊಂಬೆ ಕತ್ತರಿಸಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಬೀಳುವಂತಿರುವ ಮರಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮಾಹಿತಿ ನೀಡಬೇಕು. ಬಿರುಸಿನ ಗಾಳಿ-ಮಳೆಗೆ ಮನೆಯೊಳಗೆ ಇದ್ದು ಜಾಗ್ರತೆ ಪಾಲಿಸಬೇಕು ಎಂದು ಸೂಚನೆ ನೀಡಿದೆ.
ಹುಲ್ಲುಹಾಸಿನ, ಟಿನ್‌ಶೀಟ್ ಅಳವಡಿಸಿದ ಅಥವಾ ಸೀಲಿಂಗ್ ಇಲ್ಲದ ಮನೆಗಳಲ್ಲಿ ವಾಸಿಸುವ ನಿವಾಸಿಗಳು ಮುಂಚಿತವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ(1077) ಜತೆಗೆ ಸುರಕ್ಷಿತ ಕಟ್ಟಡಗಳಿಗೆ ಸ್ಥಳಾಂತರಗೊಳ್ಳಬೇಕು. ಸ್ಥಳಾಂತರ ಪ್ರಕ್ರಿಯೆಗೆ ಸ್ಥಳೀಯಾಡಳಿತ ಸಂಸ್ಥೆಗಳು, ಕಂದಾಯ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಸಹಕರಿಸಬೇಕು. ಬಿರುಸಿನ ಗಾಳಿ-ಮಳೆಗೆ ವಿದ್ಯುತ್ ತಂತಿಗಳು, ಕಂಬಗಳು ಧರಾಶಾಯಿಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಇಂತಹ ಯಾವುದೇ ಅಪಘಾತ ನಡೆದಲ್ಲಿ ಸಂಬಂಧಪಟ್ಟವರಿಗೆ ಮಾಹಿತಿ ನೀಡುವಂತೆಯೂ ತಿಳಿಸಲಾಗಿದೆ. ಇದಕ್ಕಾಗಿ ಕೆಎಸ್‌ಇಬಿ ನಿಯಂತ್ರಣ ಕೊಠಡಿ 1912 ಅಥವಾ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯಂತ್ರಣ ಕೊಠಡಿಯ ಟೋಲ್ ಫ್ರೀ ಸಂಖ್ಯೆ(1077)ಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಕೃಷಿ ಕಾರ್ಯಗಳಿಗಾಗಿ ಹೊಲ, ತೋಟಗಳಿಗೆ ತೆರಳುವ ಕೃಷಿಕರೂ ವಿದ್ಯುತ್ ತಂತಿಗಳ ಸುರಕ್ಷತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಮೂರು ತಾಸುಗಳೊಳಗೆ ಬಾರಿ ಗುಡುಗು, ಮಿಂಚು, ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ ಬಗ್ಗೆ ಮುನ್ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆಯ ವೆಬ್‌ಸೈಟ್*http://mausam.imd.gov.in/thanandan ನಲ್ಲಿ ನಿಯಮಿತವಾಗಿ ಅಪ್‌ಲೋಡ್ ಮಾಡಲಾಗುವುದು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ದಿನಪತ್ರಿಕೆ ಮತ್ತು ಹಾಲು ವಿತರಣೆ ಮಾಡುವವರು ಬೆಳಗಿನ ಜಾವದಲ್ಲಿ ಸಂಚರಿಸುವಾಗ ಜಾಗರೂಕರಾಗಿರಬೇಕು. ರಸ್ತೆ, ಜಲಮೂಲಗಳಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವ ಬಗ್ಗೆಯೂ ಖಾತ್ರಿಪಡಿಸಿಕೊಲ್ಲುವುದರ ಜತೆಗೆ ಯಾವುದೇ ಅಪಘಾತದ ಸಂಶಯವಿದ್ದರೂ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ ಯಾವುದೇ ಅಪಾಯವಿಲ್ಲ ಎಂದು ಖಚಿತಪಡಿಸಿಕೊಂಡ ನಂತರವೇ ಮುಂದುವರಿಯುವಂತೆಯೂ ಸೂಚಿಸಲಾಗಿದೆ.