ಅಕ್ರಮ-ಸಕ್ರಮ ಷರತ್ತು ಸಡಿಲಿಸಿ : ಮುಳಿಯ ಕೇಶವ ಭಟ್ ಮನವಿ

New Project (19)
Published on

ಸುಬ್ರಹ್ಮಣ್ಯ: ಸರ್ಕಾರದ ಅಕ್ರಮ-ಸಕ್ರಮ ಯೋಜನೆಯ ಷರತ್ತು ಸಡಿಲಿಸಿ ಯೋಜನೆಯ ಪ್ರಯೋಜನಗಳಿಂದ ರೈತರು ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಸುಳ್ಯ ತಾ.ಪಂ. ಮಾಜಿ ಅಧ್ಯಕ್ಷ ಹಾಗೂ ಭಾರತೀಯ ರಬ್ಬರ್ ಮಂಡಳಿಯ ನಿರ್ದೇಶಕ ಮುಳಿಯ ಕೇಶವ ಭಟ್ ಮನವಿ ಮಾಡಿದ್ದಾರೆ.

ಸುಳ್ಯ ತಾಲೂಕಿನ ಹಲವಾರು ರೈತರು ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡಿ ಸರ್ಕಾರದ ಅಕ್ರಮ-ಸಕ್ರಮ ಯೋಜನೆಯಂತೆ ನಮೂನೆ 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿ ಮಂಜೂರಾತಿಗೆ ಕಾಯುತ್ತಿದ್ದಾರೆ. ಆದರೆ ಈ ಅರ್ಜಿಗಳನ್ನು ಸ್ಥಳ ಪರಿಶೀಲನೆ ಮಾಡದೆ ವಿವಿಧ ಕಾರಣಗಳ ಮೂಲಕ ತಿರಸ್ಕರಿಸುವ ಬಗ್ಗೆ ರೈತರಿಂದ ದೂರುಗಳು ಬಂದಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದ್ದು ನಿಯಮ ಸಡಿಲಿಸಿ ಈವರೆಗೆ ಮಂಜೂರಾಗದ ಅರ್ಹ ರೈತರಿಗೆ ಅನುಕೂಲವಾಗುವಂತೆ ಬದಲಾವಣೆ ತರಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಗಡಿ ಗುರುತು ಮಾಡಿ: ಕನಿಷ್ಠ 1.1.2010ಕ್ಕೆ 18ವರ್ಷದಿಂದ ಸರ್ಕಾರಿ ಜಮೀನಿನಲ್ಲಿರುವ ರೈತರಿಗೆ ಮಂಜೂರಾತಿಗೆ ಅವಕಾಶ ನೀಡಬೇಕು. ಜಮೀನು ಕಾನ, ಬಾಣೆ, ಕುಮ್ಕಿ, ಡೀಮ್ಡ್ ಅರಣ್ಯ ಎಂದು ಜಿಲ್ಲಾಧಿಕಾರಿಗಳು ತಿರಸ್ಕರಿಸದೆ ನ್ಯಾಯಾಲಯದ ಅಂತಿಮ ಆದೇಶದವರೆಗೆ ಅಕ್ರಮ-ಸಕ್ರಮ ಸಮಿತಿಗೆ ಮಂಡಿಸಿ ತಾತ್ಕಾಲಿಕ ವಿಲೇ ಮಾಡಬೇಕು. ಪಶ್ಚಿಮ ಘಟ್ಟಕ್ಕೂ ಜನವಸತಿ ಪ್ರದೇಶಕ್ಕೂ ಗಡಿ ಗುರುತು ಜಂಟಿ ಸರ್ವೇ ಮಾಡಬೇಕು. ಈಗಾಗಲೇ ಹಳದಿ ರೋಗ, ಎಲೆಚುಕ್ಕಿ ರೋಗ, ಬೆಲೆ ಕುಸಿತ, ಕಾಡು ಪ್ರಾಣಿಗಳ ಹಾವಳಿ ಮುಂತಾದ ಕಾರಣಗಳಿಂದ ಕಂಗೆಟ್ಟಿರುವ ರೈತರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ನಿಯಮ ಸಡಿಲಿಸಿ ರೈತರಿಗೆ ಅನುಕೂಲ ಮಾಡಕೊಡಬೇಕು ಎಂದು ವಿನಂತಿಸಿದ್ದಾರೆ. ಮನವಿಯನ್ನು ಸಂಸದರಿಗೆ, ಶಾಸಕರಿಗೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರಿಗೆ, ವಿಧಾನಪರಿಷತ್ ಸದಸ್ಯರಿಗೆ, ಮಾಜಿ ಸಂಸದರಿಗೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net