ಪುತ್ತೂರು: ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಸರ್ಕಾರಿ ಶಾಲೆಗಳ ಶಿಕ್ಷಕರ ನಿರಾಸಕ್ತಿಯ ಕಾರಣ ಹೆಚ್ಚಿನ ಮಕ್ಕಳು ಅವಕಾಶ ವಂಚಿತರಾಗುತ್ತಿದ್ದಾರೆ. ಆದರೆ ಕಡಬ ತಾಲೂಕಿನ ಮೂಲೆಯಲ್ಲಿರುವ ಬಿಳಿನೆಲೆ ಕೈಕಂಬ ಸರ್ಕಾರಿ ಶಾಲೆಯ ಮಕ್ಕಳಿಗೆ ದೊರೆತ ಸೂಕ್ತ ಮಾರ್ಗದರ್ಶನದಿಂದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಬಿಳಿಬೆಲೆ ಕೈಕಂಬ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿ ಇರುವುದು ಕೇವಲ ೪೨ ಮಾತ್ರ. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಇರುವ ೨೬ ಮಕ್ಕಳು ತಾಲೂಕು ಮಟ್ಟದಲ್ಲಿ ಘಟಾನುಘಟಿ ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಗಳೊಂದಿಗೆ ಸ್ಪಽಸಿ ಸಮಗ್ರ ಪ್ರಶಸ್ತಿಯನ್ನು ಮುಡಿಗೆ ಏರಿಸಿದೆ.
ಕ್ಲಸ್ಟರ್‌ಹಂತದಲ್ಲಿ ೮ ವೈಯಕ್ತಿಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಕೈಕಂಬ ಶಾಲೆ ಮಕ್ಕಳಲ್ಲಿ ೪ ಪ್ರಥಮ ಸ್ಥಾನದಲ್ಲಿದ್ದು, ತಾಲೂಕು ಮಟ್ಟಕ್ಕೆ ಆಯ್ಕೆಯಾಗಿತ್ತು. ಕಿರಿಯರ ವಿಭಾಗದಲ್ಲಿ ೪ನೇ ತರಗತಿಯ ಅಯೊರ ಆಶುಭಾಷಣ ಮತ್ತು ಕಥೆ ಹೇಳುವ ಸ್ಪರ್ಧೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ, ಹಿರಿಯ ವಿಭಾಗದಲ್ಲಿ ೭ನೇ ತರಗತಿಯ ತನುಶ್ರೀ ಕನ್ನಡ ಕಂಠಪಾಠದಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ೪ನೇ ತರಗತಿಯ ತನುಷ್ ಸರ್ಕಾರಿ ಶಾಲೆಗಳ ಯೋಜನೆಗಳ ಮಹತ್ವ ಎತ್ತಿ ಹಿಡಿದು, ಸರ್ವ ಶಿಕ್ಷಣ ಅಭಿಯಾನದ ಕುರಿತಾಗಿ ಮಾಡಿದ ಛದ್ಮವೇಷ ಗಮನ ಸೆಳೆದಿದೆ.
ದೈಹಿಕ ಶಿಕ್ಷಣ ಶಿಕ್ಷಕರಿಲ್ಲದಿದ್ದರೂ ಸಾಧನೆ
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹೊಂದಿರುವ ಬಿಲಿನೆಲೆ ಕೈಕಂಬ ಶಾಲೆಯಲ್ಲಿ ಕೆಲವು ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಕಳೆದ ವರ್ಷ ದೈಹಿಕ ಶಿಕ್ಷಣ ಶಿಕ್ಷಕರಿಲ್ಲದೆ ತಾಲೂಕು ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿತ್ತು. ಕರ್ತವ್ಯಬದ್ಧ ಹಾಗೂ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಬಗ್ಗೆ ಕಾಳಜಿಯಿರುವ ಶಿಕ್ಷಕರಿದ್ದಾಗ, ಕೊರತೆಗಳು ಮತ್ತು ಇತರ ವಿಚಾರಗಳು ನಗಣ್ಯ ಎಂದು ಈ ಶಾಲೆಯ ಶಿಕ್ಷಕಿಯರು ಸಾಽಸಿ ತೋರಿಸುತ್ತಿದ್ದಾರೆ.
ಎಲ್ಲ ಮಕ್ಕಳಲ್ಲಿಯೂ ಒಂದೊಂದು ಪ್ರತಿಭೆ ಮತ್ತು ಸಾಽಸುವ ಮನೋಬಲ ಇರುತ್ತದೆ. ಅದನ್ನು ಗುರುತಿಸಿ, ಸೂಕ್ತವಾದ ಅವಕಾಶ ಸಿಗುವಾಗ ಅದನ್ನು ಮಕ್ಕಳು ಸಮರ್ಪಕವಾಗಿ ಬಳಸಲು ಧೈರ್ಯ ತುಂಬಿ, ವೇದಿಕೆ ಕಲ್ಪಿಸಿ ಕೊಡುವುದು ಶಿಕ್ಷಕರ ಕರ್ತವ್ಯವಾಗಿದೆ. ನನ್ನ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಹೆಮ್ಮೆಯಿದೆ.
| ಪವಿತ್ರ ಎ.
ಪ್ರಭಾರ ಮುಖ್ಯಶಿಕ್ಷಕಿ ಹಿರಿಯ ಪ್ರಾಥಮಿಕ ಶಾಲೆ ಬಿಳಿನೆಲೆ ಕೈಕಂಬ