

ಬೆಳಗಾವಿ: ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ನೀಡುವ ವೇತನ ಶ್ರೇಣಿಯನ್ನು ನೀಡಬೇಕೆಂದು ಬಿಜೆಪಿಯ ಪ್ರೊ.ಎಸ್.ವಿ. ಸಂಕನೂರ ಪರಿಷತ್ನಲ್ಲಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು. ‘ವಿಜಯವಾಣಿ’ಯಲ್ಲಿ ಡಿ.20ರಂದು ‘ವೇತನ ಚಳವಳಿ ಕಹಳೆ’ ಶೀರ್ಷಿಕೆಯಡಿ ಪ್ರಕಟವಾದ ವಿಶೇಷ ವರದಿಯನ್ನು ಪ್ರಸ್ತಾಪಿಸಿದ ಅವರು, ವೇತನ ತಾರತಮ್ಯ ಖಂಡಿಸಿ ನೌಕರರು ಪ್ರತಿ ಹಂತದಲ್ಲೂ ಹೋರಾಟ ಮಾಡುತ್ತಿದ್ದಾರೆ. ಆದರೂ ಬೇಡಿಕೆ ಈಡೇರಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ಕೆಲಸದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ,ಸಂಬಳದಲ್ಲಿ ವ್ಯತ್ಯಾಸ ವೇಕೆ? ಎಂದು ಕಿಡಿಯಾದರು.
ಕೇಂದ್ರ ಸರ್ಕಾರ ತನ್ನೆಲ್ಲ ನೌಕರರಿಗೆ ನೀಡುವ ವೇತನ ಶ್ರೇಣಿ, ಇತರ ಸೌಲಭ್ಯ ನೀಡಬೇಕು. ಸರ್ಕಾರಿ ಹುದ್ದೆಗಳನ್ನು ರದ್ದು ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಇರುವ ನೌಕರರ ಮೇಲೆ ಒತ್ತಡ ಹೆಚ್ಚಾಗಲಿದೆ. ರಾಜ್ಯದಲ್ಲಿ ಕಾಲಕಾಲಕ್ಕೆ ವೇತನ ಆಯೋಗಗಳನ್ನು ರಚಿಸಿದರೆ, ಈ ರೀತಿಯ ತಾರತಮ್ಯ ಆಗುವುದಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನೀತಿಯನ್ನು ಅನುಸರಿಸಬೇಕೆಂದು ವಿನಂತಿಸಿದರು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ, ಸಿಎಂ ಜತೆಗೆ ಈ ಕುರಿತು ರ್ಚಚಿಸಲಾಗುವುದು ಎಂದು ಭರವಸೆ ನೀಡಿದರು.