

ಬೆಂಗಳೂರು: ರಾಜಮೌಳಿ ನಿರ್ದೇಶನ, ಜೂನಿಯರ್ ಎನ್ಟಿಆರ್, ರಾಮ್ಚರಣ್, ಅಜಯ್ ದೇವಗನ್ ಮತ್ತಿತರ ಘಟಾನುಘಟಿಗಳ ಅಭಿನಯದಲ್ಲಿ ಮೂಡಿಬಂದಿರುವ 'ಆರ್ಆರ್ಆರ್' ನಡುವೆ ತೂರಿಕೊಳ್ಳಲು ಯೋಚಿಸಿದ್ದನಂತೆ 'ನಟ ಭಯಂಕರ'!
ಅರ್ಥಾತ್, 'ಒಳ್ಳೇ ಹುಡುಗ' ಪ್ರಥಮ್ ನಿರ್ದೇಶನ ಹಾಗೂ ಅಭಿನಯದ 'ನಟ ಭಯಂಕರ' ಸಿನಿಮಾದ ಟ್ರೇಲರನ್ನು 'ಆರ್ಆರ್ಆರ್' ಸಿನಿಮಾದ ಮಧ್ಯೆ ತೋರಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಲಾಗಿದೆ.
'ಆರ್ಆರ್ಆರ್' ಚಿತ್ರಕಥೆಯೇ ದೊಡ್ಡಾಗಿದ್ದು, ಸಿನಿಮಾ ಮೂರು ಗಂಟೆಗೂ ಅಧಿಕ ಅವಧಿಯದ್ದಾಗಿದ್ದು, ಅದರ ಮಧ್ಯೆ 'ನಟ ಭಯಂಕರ' ಟ್ರೇಲರ್ ಬಿಡುವುದು ಬೇಡ ಎಂದು ಹಿತೈಷಿಗಳು ಹೇಳಿದ್ದರಿಂದ ಸುಮ್ಮನಾಗಬೇಕಾಯಿತು ಎಂದು ಪ್ರಥಮ್ ಹೇಳಿಕೊಂಡಿದ್ದಾರೆ.
ಪ್ರಥಮ್ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ಪ್ರಥಮ್, ಸುಷ್ಮಿತಾ ಜೋಶಿ, ನೀಹಾರಿಕಾ ಶೆಣೈ ಮುಂತಾದವರು ನಟಿಸಿದ್ದು, ಸ್ವರಸ್ಯ ಸಿನಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಸದ್ಯಕ್ಕೆ ಜನವರಿಯಲ್ಲಿ ಟ್ರೇಲರ್ ಹಾಗೂ ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆಗೆ ಗುರಿ ಇರಿಸಿಕೊಳ್ಳಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.