

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದಕ್ಕೆ ಕಾರಣಗಳೇನು ಎಂಬ ವಿಷಯ ಇದೀಗ ತೀವ್ರ ಚರ್ಚೆಗೀಡಾಗಿದೆ.
ವರ್ಗಾವಣೆಗೆ ಹಲವು ಕಾರಣಗಳು ಇವೆ. ಅವರ ವಿರುದ್ಧ ದೂರುಗಳು ಕೇಳಿಬಂದಿದ್ದು ಮತ್ತು ಸೋಂಕು ನಿರ್ವಹಣೆ- ನಿಯಂತ್ರಣ ಕಾರ್ಯದಲ್ಲಿನ ವೈಲ್ಯದ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ಮಣಿದು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. 10 ಸಾವಿರ ಬೆಡ್‌ಗಳ ವ್ಯವಸ್ಥೆ ಮಾಡುವಾಗ ಅವುಗಳನ್ನು ಬಾಡಿಗೆಗೆ ಪಡೆಯಲು ನಿರ್ಧರಿಸಿದ್ದು ತೀವ್ರ ಟೀಕೆಗೆ ಗುರಿಯಾಗಿ, ಸರ್ಕಾರಕ್ಕೆ ಮುಜುಗರ ಉಂಟಾಗಿತ್ತು. ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೋಪಕ್ಕೆ ಕಾರಣವಾಗಿತ್ತು. ಅಲ್ಲದೆ ಕರೊನಾ ತುರ್ತು ಪರಿಸ್ಥಿತಿಯನ್ನು ಬಿಬಿಎಂಪಿ ಸಮರ್ಥವಾಗಿ ನಿರ್ವಹಿಸುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ವ್ಯಕ್ತವಾದ ಟೀಕೆಯೂ ಅನಿಲ್‌ಕುಮಾರ್ ವರ್ಗಾವಣೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ರಾಜ್ಯದಲ್ಲಿ 24ಗಂಟೆಯಲ್ಲಿ ಬರೋಬ್ಬರಿ 4537 ಹೊಸ ಕರೊನಾ ಪ್ರಕರಣಗಳು; 93 ಮಂದಿ ಸಾವು
ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ 8 ವಲಯಗಳಿಗೆ ಉಪಮುಖ್ಯಮಂತ್ರಿ ಸೇರಿ 7 ಪ್ರಭಾವಿ ಸಚಿವರು ಹಾಗೂ ಒಬ್ಬ ಶಾಸಕರನ್ನು ನೇಮಕ ಮಾಡಿತ್ತು. ಸಚಿವರು ನಡೆಸಿದ ಹಲವು ಸಭೆಗಳಲ್ಲಿ ಆಯುಕ್ತರು ಹಾಜರಾಗಿಲ್ಲ, ಆಸ್ಪತ್ರ್ರೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲೂ ಜತೆಗಿರಲಿಲ್ಲ. ಶುಕ್ರವಾರ ಕೋವಿಡ್ ಹರಡುವಿಕೆ ನಿಯಂತ್ರಿಸಲು ಸಿಎಂ 8 ವಲಯಗಳ ಉಸ್ತುವಾರಿ ಸಚಿವರ ಸಭೆ ಕರೆದಿದ್ದು, ಈ ಸಭೆಯಿಂದ ಆಯುಕ್ತರನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟಿದ್ದರು ಎಂದು ಹೇಳಲಾಗಿದೆ.
ಮೇಯರ್ ಸೇರಿದಂತೆ 198 ಪಾಲಿಕೆ ಸದಸ್ಯರು, 28 ವಿಧಾನಸಭಾ ಕ್ಷೇತ್ರದ ಶಾಸಕರು, ಸಂಸದರು, ವಿಧಾನಪರಿಷತ್ ಮತ್ತು ರಾಜ್ಯಸಭಾ ಸದಸ್ಯರಿಗೆ ಬಿಬಿಎಂಪಿಯ ಆಡಳಿತಾತ್ಮಕ ನಿರ್ಧಾರಗಳನ್ನು ಅನಿಲ್ ಕುಮಾರ್ ತಿಳಿಸುತ್ತಿರಲಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು. ಈ ಬಗ್ಗೆ ಮೇಯರ್ ಸರ್ಕಾರಕ್ಕೆ 3-4 ಬಾರಿ ದೂರು ನೀಡಿದ್ದರು. ಈ ಮಧ್ಯೆ, ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ಪ್ರದೇಶದಲ್ಲಿ ಬಡವರು ಮತ್ತು ನಿರ್ಗತಿಕರಿಗೆ ದಿನಸಿ ಕಿಟ್ ನೀಡುವುದು ಸೇರಿ ಅನೇಕ ವಿಚಾರಗಳಲ್ಲಿ ಬಿಬಿಎಂಪಿಗೆ ಹೈಕೋರ್ಟ್ ಇತ್ತೀಚೆಗೆ ಛೀಮಾರಿ ಹಾಕಿತ್ತು. ಆಸ್ತಿ ವಿಚಾರ, ಹುಳಿಮಾವು ಕೆರೆ ಒಡೆದ ಪ್ರಕರಣ, ಜಾಹೀರಾತು ಅಳವಡಿಕೆ ಸೇರಿದಂತೆ ಹಲವು ಪ್ರಕರಣದಲ್ಲಿಯೂ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಇದನ್ನೂ ಓದಿ ಕರೊನಾ ರೋಗಿಗಳಿಗೆ ಕಂಟೇನರ್ನಲ್ಲಿ ಚಿಕಿತ್ಸೆ; ದೇಶದಲ್ಲೇ ಮೊದಲು ಮೊಬೈಲ್ ಐಸಿಯು
ಈ ಎಲ್ಲ ಕಾರಣಗಳಿಂದಾಗಿಯೇ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರನ್ನು ಬಿಬಿಎಂಪಿ ಆಯುಕ್ತರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತು. ಅನಿಲ್ ಕುಮಾರ್ ಅವರನ್ನು ಸಾರ್ವಜನಿಕ ಉದ್ದಿಮೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಸರ್ಕಾರಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ವರ್ಗಾವಣೆ ಮಾಡಿತು. ಬಿಬಿಎಂಪಿ ನೂತನ ಆಯುಕ್ತರಾಗಿ ಎನ್. ಮಂಜುನಾಥ್ ಪ್ರಸಾದ್ ಅವರು ಪಾಲಿಕೆ ಕೇಂದ್ರ ಕಛೇರಿಯಲ್ಲಿ ಶನಿವಾರ ಸಂಜೆಯೇ ಅಧಿಕಾರ ಸ್ವೀಕರಿಸಿದರು. ನಂತರ ಮೇಯರ್ ಗೌತಮ್ ಕುಮಾರ್ ಜತೆ ಪಾಲಿಕೆಯಲ್ಲಿನ ಸ್ಥಿತಿಗತಿಗಳ ಕುರಿತು ಚರ್ಚೆ ನಡೆಸಿದರು. ಪಾಲಿಕೆ ಎಲ್ಲ ವಿಶೇಷ ಆಯುಕ್ತರು ಹಾಗೂ ಬಿಬಿಎಂಪಿ ವಾರ್ ರೂಂ ಹಾಗೂ ಇತರೆ ಕಾರ್ಯ ಚಟುವಟಿಕೆಗಳನ್ನು ಪರಿಶೀಲನೆ ನಡೆಸಿದರು.