

ಬೆಂಗಳೂರು: ಸಿಡಿ ಕೇಸ್ ಸಂಬಂಧ ಶುಕ್ರವಾರ ಎಸ್ಐಟಿ ವಿಚಾರಣೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಜರಾಗಿದ್ದರು. ಆಡುಗೋಡಿ ಟೆಕ್ನಿಕಲ್ ಸೆಲ್ನಲ್ಲಿ ನಿರಂತರ 4 ಗಂಟೆ ಕಾಲ ಜಾರಕಿಹೊಳಿಯನ್ನು ಎಸ್ಐಟಿ ಪೊಲೀಸರು ತೀವ್ರ ವಿಚಾರಣೆ ನಡೆಸಿದರು.
ನಿನ್ನೆ ನಡೆದ ವಿಚಾರಣೆಯಲ್ಲಿ ಏನೇನೆಲ್ಲ ಆಯ್ತು ಎಂಬುದರ ಇನ್ಸೈಡ್ ಮಾಹಿತಿ ಇಲ್ಲಿದೆ. ವಿಚಾರಣೆಗೂ ಮುನ್ನ ವಿವಿಧ ಆಯಾಮಗಳಲ್ಲಿ 50 ಪ್ರಶ್ನೆಗಳನ್ನ ಎಸ್ಐಟಿ ಸಿದ್ಧಪಡಿಸಿಕೊಂಡಿತ್ತು. ನಿನ್ನೆ ಸಂಜೆ 4 ಗಂಟೆಗೆ ಬಂದ ರಮೇಶ್ ಜಾರಕಿಹೊಳಿ, ಈ 50 ಪ್ರಶ್ನೆಗಳಲ್ಲಿ ಉತ್ತರಿಸಿದ್ದು 20 ಪ್ರಶ್ನೆಗೆ ಮಾತ್ರ. ಇದನ್ನೂ ಓದಿರಿ ‘ಸಿಡಿ ಲೇಡಿ’ ಹೆಸರಲ್ಲಿ ರಿಜಿಸ್ಟರ್ ಆಯ್ತು ಸಿನಿಮಾ ಟೈಟಲ್! ಸ್ಯಾಂಡಲ್ವುಡ್ನಲ್ಲಿ ವಿವಾದ ಎಬ್ಬಿಸಲಿದ್ಯಾ?
ಸಿಡಿ ಕೇಸ್ನ ಕಿಂಗ್ಪಿನ್ ಎನ್ನಲಾದ ನರೇಶ್ ಗೌಡನ ಫೋಟೋ ತೋರಿಸಿದ ಎಸ್ಐಟಿ, 'ಈತನನ್ನ ನೋಡಿದ್ದೀರಾ? ನಿಮ್ಮ ಸಂಪರ್ಕಕ್ಕೆ ನರೇಶ್ ಬಂದಿದ್ದನೇ? ನಿಮ್ಮ ಬಳಿ ಎಷ್ಟು ಮಂದಿ ಆಪ್ತ ಸಹಾಯಕರಿದ್ದಾರೆ? ಅವರನ್ನ ಸಿಡಿ ಕೇಸ್ ತಂಡದಲ್ಲಿರುವ ಯಾರಾದರೂ ಸಂಪರ್ಕಿಸಿದ್ದರೇ? ಯುವತಿ ಹೇಗೆ ಪರಿಚಯ? ಯಾರಿಂದ ಪರಿಚಯ? ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟರು.
ಎಸ್ಐಟಿ ಅಧಿಕಾರಿಗಳ ಕೆಲ ಪ್ರಶ್ನೆಗೆ ಅಳೆದು ತೂಗಿ ಉತ್ತರ ನೀಡಿದ ರಮೇಶ್ ಜಾರಕಿಹೊಳಿ, ಉಳಿದ ಪ್ರಶ್ನೆಗಳಿಗೆ ತನ್ನ ವಕೀಲರನ್ನು ಸಂಪರ್ಕಿಸಿದ ಬಳಿಕ ಹೇಳ್ತೀನಿ ಎಂದರು. ಈ ಹಿಂದೆ ದೂರು ನೀಡಿದ್ದ ವೇಳೆಯೂ ಮಾಜಿ ಸಚಿವರು ಅಸ್ಪಷ್ಟ ಮಾಹಿತಿ ನೀಡಿದ್ದರು. ಷಡ್ಯಂತ್ರ ನಡೆಸಿದ್ದಾರೆಂದು ಹೇಳಿದ್ದ ಜಾರಕಿಹೊಳಿ, ಯಾರು ಆ ವ್ಯಕ್ತಿಗಳೆಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಸದಾಶಿವನಗರದಲ್ಲಿ ನಡೆದಿದ್ದ ಕುತಂತ್ರ ಎಂದು ಹೇಳಿದ್ದರಷ್ಟೆ. ಆದರೆ ಸದಾಶಿವನಗರದಲ್ಲಿ ಎಲ್ಲಿ? ಎಂದು ರಿವೀಲ್ ಮಾಡಿರಲಿಲ್ಲ.