

ಬೆಳಗಾವಿ: ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ 17 ಶಾಸಕರು ಸಂತೋಷದಿಂದ ಇದ್ದಾರೆ. ಯಾರೂ ಕಾಂಗ್ರೆಸ್ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದ ಸಿಪಿಇಡಿ ಮೈದಾನದಲ್ಲಿ ಬಿಜೆಪಿ ಬೆಳಗಾವಿ ಗ್ರಾಮೀಣ ಘಟಕ ಭಾನುವಾರ ಹಮ್ಮಿಕೊಂಡಿದ್ದ ಗ್ರಾಪಂ ನೂತನ ಸದಸ್ಯರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಈಗಲೂ ನಮ್ಮ ನಾಯಕರೇ. ಅವರೊಂದಿಗೆ ಉತ್ತಮ ಸಂಬಂಧವಿದೆ. ಆದರೆ, ಕಾಂಗ್ರೆಸ್ಗೆ ಹೋಗಲ್ಲ. ಕಾಂಗ್ರೆಸ್ನಲ್ಲಿ ಐವರು ಶಾಸಕರು ಈಗಾಗಲೇ ರಾಜೀನಾಮೆ ನೀಡಲು ಸಿದ್ಧವಿದ್ದಾರೆ. ಅವರ ಹೆಸರು ಕೇಳಿದರೆ ನೀವೂ ಗಾಬರಿಯಾಗುತ್ತೀರಿ. ನಾನು ಮನಸ್ಸು ಮಾಡಿದರೆ ಇಪ್ಪತ್ನಾಲ್ಕೇ ಗಂಟೆಗಳಲ್ಲಿ ಅವರನ್ನು ಬಿಜೆಪಿಗೆ ಕರೆತರುತ್ತೇನೆ ಎಂದರು.
ಮುಂದಿನ ಸಲ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು 60 ಸಾವಿರ ಲೀಡ್ನೊಂದಿಗೆ ಬಿಜೆಪಿ ತೆಕ್ಕೆಗೆ ಪಡೆಯಲಾಗುವುದು. ನಮ್ಮದು ಸುಸಂಸ್ಕೃತ ರಾಷ್ಟ್ರ. ಮಹಿಳೆಯರಿಗೆ ನಾವೂ ಪೂಜ್ಯನೀಯ ಸ್ಥಾನ ನೀಡಿದ್ದೇವೆ. ರಾಜಕೀಯವಾಗಿ ಮಾತ್ರ ವಿರೋಧಿಸಬೇಕು. ವೈಯಕ್ತಿಕ ಟೀಕೆ ಬೇಡ. ಇತಿಮಿತಿಯಲ್ಲೇ ಮಾತನಾಡಬೇಕು ಎಂದು ಹೆಬ್ಬಾಳ್ಕರ್ ವಿರುದ್ಧ ಹರಿಹಾಯ್ದರು.