

ಬೆಳ್ತಂಗಡಿ: ತಾಲೂಕಿನ ಅಳದಂಗಡಿ ಸಮೀಪದ ಪಿಲ್ಯ ಎಂಬಲ್ಲಿ ಇತ್ತೀಚೆಗೆ ಭಾರಿ ಗಾಳಿ-ಮಳೆಗೆ ಮನೆಯೊಂದು ಸಂಪೂರ್ಣ ಕುಸಿದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಹಾಯಹಸ್ತ ನೀಡಿ ಮನೆಯ ತಾತ್ಕಾಲಿಕ ದುರಸ್ತಿಗೆ ನೆರವಾದರು.
ಅಳದಂಗಡಿ ಸಮೀಪದ ಪಿಲ್ಯದ ವಿಮಲ ಮಡಿವಾಳ ಎಂಬುವರ ಮನೆ, ತೀವ್ರ ಸ್ವರೂಪದ ಗಾಳಿ-ಮಳೆಗೆ ಸಂಪೂರ್ಣ ಕುಸಿದಿತ್ತು. ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕ ಸಂತೋಷ್ ಪೂಜಾರಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಗಮನಕ್ಕೆ ತಂದಿದ್ದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ರಕ್ಷಿತ್ ಶಿವರಾಂ ಸಹಾಯಹಸ್ತ ನೀಡಿ, ಸಂತೋಷ್ ನಿನ್ನಿಕಲ್ಲು ನೇತೃತ್ವದಲ್ಲಿ ಮನೆ ದುರಸ್ತಿ ಮಾಡಲು ಸೂಚಿಸಿದರು. ಉದ್ಯಮಿ ಪ್ರವೀಣ್ ಫರ್ನಾಂಡಿಸ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ಲೋಬೊ ಉಪಸ್ಥಿತರಿದ್ದರು.