ಬೆಳ್ತಂಗಡಿ: ವಿಜ್ಞಾನದ ಎಲ್ಲ ವಲಯಗಳಿಗೂ ಪೂರಕವಾಗುವ ಸಂಶೋಧನಾ ಫಲಿತಗಳೊಂದಿಗೆ ಸಂಶ್ಲೇಷಿತ ಸಾವಯವ ರಸಾಯನಶಾಸ್ತ್ರ ಗಮನ ಸೆಳೆಯುತ್ತಿದೆ ಎಂದು ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿವಿಯ ಕೆಮಿಕಲ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಅನಿಲ್‌ಕುಮಾರ್ ಹೇಳಿದರು.
ಉಜಿರೆ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಅಡ್ವಾನ್ಸಸ್ ಇನ್ ಸಿಂಥೆಟಿಕ್ ಆರ‌್ಗಾನಿಕ್ ಕೆಮಿಸ್ಟ್ರಿ ಕುರಿತು ಆಯೋಜಿಸಿದ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ರಾಷ್ಟ್ರಮಟ್ಟದ ಕೆಮ್‌ಶೋಧನಾ ಅಂತರ್‌ಕಾಲೇಜು ಸ್ಪರ್ಧಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಗೋವಾದ ಸೈಂಗೆಟಾ ಬಯೋಸೈನ್ಸಸ್ ಕಂಪನಿಯ ಪ್ರಧಾನ ಸಂಶೋಧನಾ ವಿಜ್ಞಾನಿ ಡಾ.ಮಂಜುನಾಥ ಚೆನ್ನಾಪುರ ಮಾತನಾಡಿ, ಭವಿಷ್ಯದ ದಿನಗಳನ್ನು ಸುಸ್ಥಿರ ಅಭಿವೃದ್ಧಿಯ ನೆಲೆಗಟ್ಟಿನಲ್ಲಿ ರೂಪಿಸಿಕೊಳ್ಳಲು ಹಸಿರು ರಸಾಯನಶಾಸ್ತ್ರದ ಪರಿಕಲ್ಪನೆಯನ್ನು ಅನ್ವಯಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹಸಿರು ಸಮೃದ್ಧಿಯೊಂದಿಗೆ ಮನುಷ್ಯ ಬದುಕು ಸುಸ್ಥಿರವಾಗುತ್ತದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಹಸಿರು ರಸಾಯನಶಾಸ್ತ್ರದ ಪರಿಕಲ್ಪನೆಯನ್ನು ಗಟ್ಟಿಗೊಳಿಸುವ ಸಂಶೋಧನಾ ಹೆಜ್ಜೆಗಳು ರೂಪುಗೊಳ್ಳಬೇಕು. ಹಾಗಾದಾಗ ಮಾತ್ರ ರಸಾಯನಶಾಸ್ತ್ರದ ಸಂಶೋಧನಾತ್ಮಕತೆಗೆ ಸುಸ್ಥಿರತೆಯ ಆಯಾಮ ದೊರಕುತ್ತದೆ ಎಂದರು.
ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ ಪಿ. ಮಾತನಾಡಿ, ಹೊಸ ರೀತಿಯಲ್ಲಿ ಆಲೋಚಿಸುವ ಯುವ ಪೀಳಿಗೆ ಶಿಕ್ಷಣ ವಲಯದಲ್ಲಿ ಗಮನ ಸೆಳೆಯುತ್ತಿದೆ. ಶೈಕ್ಷಣಿಕ ಕಲಿಕೆಯ ಸ್ವರೂಪ ಬದಲಾಗುತ್ತಿದ್ದಂತೆ ಅದಕ್ಕೆ ತಕ್ಕಂತೆ ಸಾಮರ್ಥ್ಯ ರೂಪಿಸಿಕೊಳ್ಳುವ ಉತ್ಸಾಹವೂ ಕಂಡುಬರುತ್ತಿದೆ. ಇಂತಹ ಉತ್ಸಾಹಕ್ಕೆ ಪೂರಕವಾಗಿ ರಾಷ್ಟ್ರೀಯ ವಿಚಾರಸಂಕಿರಣಗಳಂತಹ ಕಾರ್ಯಕ್ರಮಗಳು ಹೊಸದೊಂದನ್ನು ಆವಿಷ್ಕರಿಸುವುದಕ್ಕೆ ಪ್ರೇರಣೆ ಒದಗಿಸುವ ವೇದಿಕೆಗಳಾಗಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಸಹಾಯಕ ಪ್ರಾಧ್ಯಾಪಕರಾದ ಡಾ.ವಸಂತಕುಮಾರ್, ಡಾ.ರಾಜೇಶ್ ಹೆಗ್ಡೆ ಉಪಸ್ಥಿತರಿದ್ದರು. ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯಾ ಬಿ.ಪಿ. ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಡಾ.ನೆಫಿಸತ್ ವಂದಿಸಿದರು. ವಿದ್ಯಾರ್ಥಿನಿ ಸೋನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.