

ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನಪರಿಷತ್ಗೆ ನಡೆಯುವ ಚುನಾವಣೆ ಎರಡೂ ರಾಷ್ಟ್ರೀಯ ಪಕ್ಷಗಳ ಮುಂಚೂಣಿ ನಾಯಕರಿಗೆ ಪ್ರತಿಷ್ಠೆಯಾಗಿದೆ. ಪಕ್ಷದ ಮೇಲಿನ ತಮ್ಮ ಹಿಡಿತ ಸಾಬೀತುಪಡಿಸಲು ಬಿಜೆಪಿ ಹಾಗೂ ಕಾಂಗ್ರೆಸ್ನ ನಾಯಕರು ತಮ್ಮ ಅಭ್ಯರ್ಥಿಗೆ ಟಿಕೆಟ್ ಕೊಡಿಸುವ ಸವಾಲು ಎದುರಿಸುತ್ತಿದ್ದಾರೆ.
ಬದಲಾದ ರಾಜಕೀಯದಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿದು ಪ್ರತಿಪಕ್ಷ ಸ್ಥಾನದಲ್ಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು ಬದಲಾಗಿದ್ದಾರೆ, ಎಐಸಿಸಿ ಯಲ್ಲೂ ಬದಲಾವಣೆ ನಡೆದಿದೆ. ಆದರೂ ಪಕ್ಷದ ಮೇಲೆ ತಮಗೆಷ್ಟು ಹಿಡಿತ ಇದೆ, ತಮ್ಮ ಮಾತು ಪಕ್ಷ ಎಷ್ಟು ಆಲಿಸುತ್ತದೆ ಎಂಬುದನ್ನು ಒರೆಗೆ ಹಚ್ಚುವ ಸಮಯ ಅವರದ್ದು. ರಾಜ್ಯಸಭೆ ಚುನಾವಣೆಯ ಒಂದು ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹೊರತು ಬೇರೆಯವರು ಅಭ್ಯರ್ಥಿ ಎಂದಾದರೆ ಆಗ ಸಿದ್ದರಾಮಯ್ಯ ಅವರ ಅಭಿಪ್ರಾಯ ಮಹತ್ವ ಎನಿಸಿಕೊಳ್ಳುತ್ತದೆ. ಅದೇ ರೀತಿ ವಿಧಾನಪರಿಷತ್ನ ಎರಡು ಅಥವಾ ಮೂರು ಸ್ಥಾನಕ್ಕೆ ಯಾರ ಪರ ನಿಲ್ಲುತ್ತಾರೆ, ಪಕ್ಷ ಅವರ ಅಭಿಪ್ರಾಯ ಪರಿಗಣಿಸುತ್ತದೆಯೇ ಎಂಬುದು ಬಹುಮುಖ್ಯ ಸಂಗತಿ.
ಸಿದ್ದರಾಮಯ್ಯ ಕೌಂಟರ್ ಪಾರ್ಟ್ ಆಗಿ ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿದ್ದು ಸಹಜವಾಗಿ ಅವರು ತಮ್ಮ ಛಾಪು ತೋರಿಸುವ ಮೊದಲ ಚುನಾವಣೆ ಇದು. ಅಧ್ಯಕ್ಷರಾಗಿ ಅಭಿಪ್ರಾಯಗಳನ್ನು ಆಲಿಸಿದರೂ ಅವರ ನಿರ್ಧಾರಕ್ಕೆ ಬೆಲೆ ಬರುವಂತೆ ನೋಡಿಕೊಳ್ಳುತ್ತಾರೆ ಎಂಬುದು ಸರ್ವವಿದಿತ. ಈ ಕಾರಣಕ್ಕೆ ಕಾಂಗ್ರೆಸ್ನಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಹೊಯ್ದಾಟ. ಯಾರ ಶಿಫಾರಸಿಗೆ ಹೈಕಮಾಂಡ್ ಮಣೆ ಹಾಕುತ್ತದೆ ಎಂಬುದರ ಮೇಲೆ ಅವರ ಪ್ರಭಾವದ ಒಂದು ಮಜಲು ಕಾಣಿಸಲಿದೆ.
ಬಿಜೆಪಿಯಲ್ಲಿ ಸಹ ಇದೇ ವಾತಾವರಣವಿದೆ. ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ಗಿಂತಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರಭಾವ ಹೆಚ್ಚಿದೆ. ಇಲ್ಲಿಯೂ ಕಾಂಗ್ರೆಸ್ನಂತೆಯೇ ಅವರವರ ಅಭ್ಯರ್ಥಿಗಳು ಬೇರೆಬೇರೆ. ಪ್ರಭಾಕರ ಕೋರೆ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸುವ ಇಚ್ಛೆ ಬಿಎಸ್ವೈ ಅವರದ್ದು. ಜತೆಗೆ ರಮೇಶ್ ಕತ್ತಿಯವರಿಗೂ ಸೂಕ್ತ ಸ್ಥಾನಮಾನ ಕಲ್ಪಿಸಬೇಕಿದೆ. ಅತ್ತ ಪಕ್ಷದ ಕಡೆಯಿಂದ ಬೇರೆಬೇರೆ ಹೆಸರು ತೇಲಿ ಬರುತ್ತಿದೆ. ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯುವ ಚುನಾವಣೆ ಹಾಗೂ ನಾಮನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಅವಕಾಶ ಹಂಚಿಕೆ ಮಾಡಬೇಕಾಗಿದೆ. ಈ ಪ್ರಯತ್ನದಲ್ಲಿ ಕಟೀಲ್ ಎಷ್ಟು ಮೇಲುಗೈ ಸಾಧಿಸುತ್ತಾರೆಂಬ ಕುತೂಹಲವಿದೆ.
ಪರಿಷತ್ ಆಯ್ಕೆ ವಿಚಾರಕ್ಕೆ ಬರುವುದಾದರೆ ಸರ್ಕಾರ ರಚನೆಗೆ ಕಾರಣವಾದ ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಎಚ್.ವಿಶ್ವನಾಥ್ ಅವರಿಗೆ ಪರಿಷತ್ಗೆ ಅವಕಾಶ ಮಾಡಿಕೊಡುವ ಜವಾಬ್ದಾರಿ ಸಿಎಂ ಮೇಲಿದೆ. ಈ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡೇ ಉಳಿದವರಿಗೆ ಅವಕಾಶ ನೀಡಬೇಕಿದೆ. ಕಾಂಗ್ರೆಸ್ನಲ್ಲಿ ನಿವೇದಿತ್ ಆಳ್ವ, ನಸೀರ್ ಅಹ್ಮದ್, ಶಫಿವುಲ್ಲಾ, ಐವಾನ್ ಡಿಸೋಜ ಪೈಕಿ ಸಿದ್ದರಾಮಯ್ಯ ಯಾರ ಪರ ಎಂಬುದು ಸ್ಪಷ್ಟವಾಗಿಲ್ಲ. ಒಬಿಸಿ ಕೋಟಾದಡಿ ನೀಡುವ ಸ್ಥಾನಕ್ಕೆ ಎಂ.ಸಿ. ವೇಣುಗೋಪಾಲ್ ಪರ ಅವರು ಒಲವು ಹೊಂದಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆ ವೇಳೆ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡರಿಗೆ ಕಣಕ್ಕಿಳಿಯಲು ಅವಕಾಶ ಮಾಡಿಕೊಟ್ಟ ಮುದ್ದಹನುಮೇಗೌಡರ ಪರ ಡಿ.ಕೆ.ಶಿವಕುಮಾರ್ ನಿಲ್ಲುತ್ತಾರಾ ಎಂಬ ಕುತೂಹಲ ಪಕ್ಷದ ನಾಯಕರಿಗಿದೆ. ರಾಜ್ಯಸಭಾ ಚುನಾವಣೆಗೆ ಜೂ. 9ರಂದು ನಾಮಪತ್ರ ಸಲ್ಲಿಸಲು ಕಡೆಯ ದಿನ. ಜೂ. 5ರಂದೇ ಕಾಂಗ್ರೆಸ್ ‘ಒಮ್ಮತದ’ ಚಿತ್ರಣ ಬಹುತೇಕ ಸ್ಪಷ್ಟವಾಗಲಿದೆ.