ನಿಮ್ಮ ಮೊಬೈಲ್​ನಲ್ಲಿ ಚೀನಾದ ಆ್ಯಪ್​ ಇದೆಯೆ- ಪತ್ತೆ ಹಚ್ಚೋದು ಹೇಗೆ?

remove-china-apps 31 MAY 20
Published on

ಬೆಂಗಳೂರು: ಕಳೆದ ಕೆಲವು ದಿನಗಳಿಂದ #BoycottMadeInChina ಎಂಬ ಟ್ರೆಂಡ್ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಇದಕ್ಕೆ ಪೂರಕವಾಗಿ #SoftwareInAWeekHardwareInAYear ಆ ಮೂಲಕ ನಿಮ್ಮ ವ್ಯಾಲೆಟ್​ನ ಪವರ್ ಏನು ಎಂಬುದನ್ನು ಚೀನಾಕ್ಕೆ ತೋರಿಸಿ ಎಂಬ ಅಭಿಯಾನವೂ ನಡೆದಿದೆ. ಕಾರಣ ಇಷ್ಟೇ, ಜಗತ್ತಿಗೆಲ್ಲ ಕೋವಿಡ್ 19 ವೈರಸ್ ಹರಡಿದ ಚೀನಾ ತನ್ನ ಭೌಗೋಳಿಕ ವ್ಯಾಪ್ತಿ ಹೆಚ್ಚಿಸಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದೆ. ಭಾರತದ ಗಡಿಭಾಗದಲ್ಲೂ ಅತಿಕ್ರಮಣ ತೋರಿರುವ ಚೀನಾ ಆಕ್ರಮಣಶಾಲಿ ಪ್ರವೃತ್ತಿಯನ್ನು ಮುಂದುವರಿಸಿದೆ. ಅದು ತನ್ನ ಸುತ್ತ ಇರುವ ಕೆಲವು ಇತರೆ ರಾಷ್ಟ್ರಗಳ ಜತೆಗೂ ಇದನ್ನೆ ಮಾಡುತ್ತಿರುವ ಕಾರಣ ಚೀನಾ ವಿರೋಧಿ ಭಾವ ಜಗತ್ತನ್ನು ಆವರಿಸಿದೆ.

ಈ ಆ್ಯಪ್​ ಹೇಗೆ ಕೆಲಸ ಮಾಡುತ್ತದೆ? ನೀವು ಗೂಗಲ್ ಪ್ಲೇ ಸ್ಟೋರ್​ಗೆ ಹೋಗಿ ಈ ಆ್ಯಪನ್ನು ಡೌನ್​ಲೋಡ್ ಮಾಡಿ ಇನ್​ಸ್ಟಾಲ್ ಮಾಡಬೇಕು. ನಂತರ ಇದನ್ನು ಓಪನ್ ಮಾಡಿದರೆ ನಿಮ್ಮ ಫೋನಿನಲ್ಲಿರುವ ಆ್ಯಪ್​ಗಳನ್ನು ಇದು ಸ್ಕ್ಯಾನ್ ಮಾಡುತ್ತದೆ. ಚೀನಾ ಮೂಲ ಆ್ಯಪ್​ಗಳಿದ್ದರೆ ಪತ್ತೆ ಹಚ್ಚಿ ನಿಮ್ಮ ಮುಂದೆ ಅದರ ವಿವರವನ್ನು ಇರಿಸುತ್ತದೆ. ಅವುಗಳನ್ನು ನೀವು ಕೂಡಲೇ ರಿಮೂವ್ ಮಾಡಿದರೆ. Congratulation- You are awesome, No China App Found In ಎಂಬ ಸಂದೇಶ ಪರದೆ ಮೇಲೆ ಮೂಡುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರೂ ಇತ್ತೀಚಿನ ಭಾಷಣದಲ್ಲಿ ಸ್ವಾಭಿಮಾನಿ ಭಾರತ ಅಥವಾ ಆತ್ಮನಿರ್ಭರ ಭಾರತ ಕಟ್ಟುವ ವಿಚಾರ ಪ್ರಸ್ತಾಪಿಸಿದ್ದರು. ಇದಕ್ಕೆ ಪೂರಕವಾಗಿ ಚೀನಾದ ಆ್ಯಪ್​ಗಳು, ಉತ್ಪನ್ನಗಳ ಬಳಕೆಯನ್ನು ನಿಲ್ಲಿಸುವ ಅಭಿಯಾನ ಶುರುವಾಗಿದೆ. ಇಂಥ ಸನ್ನಿವೇಶದಲ್ಲಿ ಬಹುತೇಕರು ತಮ್ಮ ಸ್ಮಾರ್ಟ್​ಫೋನ್​ಗಳಲ್ಲಿ ಚೀನಾದ ಆ್ಯಪ್​ಗಳನ್ನು ತಾವೇ ಡೌನ್​ಲೋಡ್ ಮಾಡಿಕೊಂಡು ಬಳಸುತ್ತಿದ್ದಾರೆ. ಅದು ಟಿಕ್​ಟಾಕ್ ಇರಬಹುದು, ಕ್ಯಾಮ್​ಸ್ಕಾನರ್ ಇರಬಹುದು ಈ ರೀತಿ ಹಲವಾರು ಆ್ಯಪ್​ಗಳಿವೆ. ಅವು ಯಾವುವು ಎಂದು ಪತ್ತೆ ಹಚ್ಚುವುದು ಹೇಗೆ? ಎಂಬ ಪ್ರಶ್ನೆ ಅನೇಕರದ್ದು.

ಇದಕ್ಕೆ ಉತ್ತರವಾಗಿ ಪ್ರಧಾನಿಯವರ ಸ್ವಾಭಿಮಾನಿ ಭಾರತದ ಕರೆಗೆ ಪೂರಕವಾಗಿ ಜೈಪುರ ಮೂಲದ ಒನ್​ಟಚ್​​ ಆ್ಯಪ್ಸ್ ಲ್ಯಾಬ್ಸ್ ಎಂಬ ಸಂಸ್ಥೆ ರಿಮೂವ್ ಚೀನಾ ಆ್ಯಪ್ಸ್ ಎಂಬ ಆ್ಯಪ್​ ಅನ್ನು ಅಭಿವೃದ್ಧಿ ಪಡಿಸಿದೆ. ಸದ್ಯ ಆಂಡ್ರಾಯ್ಡ್ ಫೋನ್ ಬಳಕೆದಾರರಿಗಷ್ಟೇ ಇದು ಲಭ್ಯವಿದೆ. ಐಒಎಸ್​ ಮತ್ತು ಇತರೆ ಫೋನ್​ಗಳಿಗೆ ಹೊಂದುವ ಆ್ಯಪನ್ನು ಇನ್ನೂ ಅಭಿವೃದ್ಧಿ ಪಡಿಸಿಲ್ಲ. ಇದು ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಜನ ಇದನ್ನು ಡೌನ್​ಲೋಡ್ ಮಾಡಿದ್ದು, 4.8 ರೇಟಿಂಗ್ ಕೂಡ ಕೊಟ್ಟಿದ್ದಾರೆ. 50,000 ದ ಹತ್ತಿರ ಹತ್ತಿರ ಬಳಕೆದಾರರು ರಿವ್ಯೂವ್ ಕೂಡ ಕೊಟ್ಟಿದ್ದಾರೆ.

ಕೆಲವು ಮೊಬೈಲ್​ಗಳಲ್ಲಿ ಚೀನಾ ಆ್ಯಪ್​ಗಳು ಇನ್​ಬಿಲ್ಟ್ ಆಗಿ ಬಂದಿರುತ್ತವೆ. ಅಂಥವನ್ನು ರಿಮೂವ್ ಮಾಡೋದಕ್ಕೆ ಆಗುವುದಿಲ್ಲ. ಹೀಗಾಗಿ ಅವುಗಳನ್ನು ಪತ್ತೆ ಹಚ್ಚಿ ಹೇಳುವುದಿಲ್ಲ ಈ ಆ್ಯಪ್​. ಆದಾಗ್ಯೂ ಈ ಕುರಿತ ಕೆಲಸ ಪ್ರಗತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಆ್ಯಪ್​​ಅನ್ನು ಅಪ್ಡೇಟ್ ಮಾಡುವುದಾಗಿ ಲ್ಯಾಬ್ಸ್ ಹೇಳಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net