ಚೀನಾ ವಿಮಾನಗಳಿಗೆ ಪ್ರವೇಶ ನಿಷೇಧಿಸಿದ ಅಮೆರಿಕ!

china-airlines
Published on

ವಾಷಿಂಗ್ಟನ್: ಚೀನಾದಿಂದ ಬರುವ ವಿಮಾನಗಳಿಗೆ ಪ್ರವೇಶಾವಕಾಶ ನಿರಾಕರಿಸಲು ಅಮೆರಿಕ ಸರ್ಕಾರ ಬುಧವಾರ ನಿರ್ಧರಿಸಿದೆ. ಈ ಕ್ರಮದಿಂದಾಗಿ, ಅಮೆರಿಕ ಮತ್ತು ಚೀನಾ ನಡುವೆ ಈಗಾಗಲೇ ಹಳಸಿಹೋಗಿರುವ ಸಂಬಂಧ ಇನ್ನಷ್ಟು ಕೆಡುವ ಸಾಧ್ಯತೆ ಇದೆ.

ಈ ನಿಷೇಧ ಚೀನಾದ ನಾಲ್ಕು ಪ್ರಯಾಣಿಕ ವಿಮಾನಯಾನ ಕಂಪನಿಗಳಿಗೆ ಅನ್ವಯಿಸಲಿದೆ ಎಂದು ಅಮೆರಿಕದ ಸಾರಿಗೆ ಇಲಾಖೆ ತಿಳಿಸಿದೆ. ಈ ಕಂಪನಿಗಳು ಜೂನ್ 16ರಿಂದ ತಮ್ಮ ಕಾರ‌್ಯಾಚರಣೆ ಆರಂಭಿಸಲು ಉದ್ದೇಶಿಸಿದ್ದವು. ಚೀನಾದಿಂದ ಅಮೆರಿಕಕ್ಕೆ ಮತ್ತು ಅಮೆರಿಕದಿಂದ ಚೀನಾಕ್ಕೆ ವಿಮಾನಯಾನ ಅಂದು ಆರಂಭವಾಗುವುದಿತ್ತು.

ಈ ವಾರ ಚೀನಾಕ್ಕೆ ಅಮೆರಿಕದಿಂದ ಆರಂಭವಾಗಲಿದ್ದ ಯುನೈಟೆಡ್ ಏರ್‌ಲೈನ್ಸ್ ಮತ್ತು ಡೆಲ್ಟಾ ಏರ್ ವಿಮಾನ ಕಂಪನಿಗಳ ಕಾರ್ಯಾಚರಣೆಗೆ ಚೀನಾ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ. ಈ ಎರಡೂ ಕಂಪನಿಗಳು ಚೀನಾದ ವುಹಾನ್‌ನಲ್ಲಿ ಕರೊನಾ ಹಾವಳಿ ಅತಿಯಾಗಿದ್ದ ಸಂದರ್ಭದಲ್ಲಿ ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿದ್ದವು.

ಮುಂದಿನ ದಿನಗಳಲ್ಲಿ ಕೂಡ ಚೀನಾದವರು ಅಮೆರಿಕದ ಎಷ್ಟು ಪ್ರಯಾಣಿಕ ವಿಮಾನಗಳಿಗೆ ಅವಕಾಶ ನೀಡುತ್ತಾರೆಯೋ ನಾವೂ ಅಷ್ಟೇ ಪ್ರಮಾಣದ ವಿಮಾನಗಳಿಗೆ ನಮ್ಮ ನೆಲದಲ್ಲಿ ಲ್ಯಾಂಡ್ ಆಗಲು ಅವಕಾಶ ನೀಡುತ್ತೇವೆ. ಜೂನ್ 16ರಂದೇ ಈ ಕುರಿತು ಅಧಿಕೃತ ಆದೇಶವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿ ಮಾಡಲಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net