ರಸ್ತೆಯಲ್ಲೇ ಮಳೆ ನೀರು : ಸವಾರರಿಗೆ ನಿತ್ಯ ಕಿರಿಕಿರಿ : ಮಾಯವಾದ ಚರಂಡಿಗಳು

male neeru
ಕಟಪಾಡಿಯಿಂದ ಬೆಳ್ಮಣ್ ಸಾಗುವ ರಾಜ್ಯ ಹೆದ್ದಾರಿಯಲ್ಲೇ ಹರಿಯುವ ಮಳೆ ನೀರು
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಬೇಸಿಗೆ ಸಂದರ್ಭ ರಸ್ತೆಬದಿ ಅಗೆದು ಕೇಬಲ್ ಅಳವಡಿಕೆ ಹಾಗೂ ನೀರಿನ ಪೈಪ್‌ಲೈನ್ ಕಾಮಗಾರಿ ನಡೆಸಿದ ಪರಿಣಾಮ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಸೇರಿ ಗ್ರಾಮೀಣ ಭಾಗದ ರಸ್ತೆಗಳಲ್ಲೇ ಮಳೆ ನೀರು ಹರಿಯುತ್ತಿದ್ದು, ವಾಹನ ಸವಾರರ ಸಹಿತ ಪಾದಚಾರಿಗಳು ಸಮಸ್ಯೆ ಎದುರಿಸುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ಸೇರಿ ಕಟಪಾಡಿಯಿಂದ ಶಂಕರಪುರ, ಬಂಟಕಲ್ಲು, ಶಿರ್ವ ಮಾರ್ಗವಾಗಿ ಬೆಳ್ಮಣ್ ಜಂಕ್ಷನ್ ಜೋಡಿಸುವ 21 ಕಿ.ಮೀ ಉದ್ದದ ಮುಖ್ಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನ ಸವಾರರ ಸಹಿತ ಪಾದಚಾರಿಗಳು ಸಂಕಟ ಅನುಭವಿಸುವಂತಾಗಿದೆ. ನಿತ್ಯ ಸಾವಿರಾರು ವಾಹನಗಳು ಓಡಾಡುವ ಸಂದರ್ಭ ಕೆಸರು ತುಂಬಿದ ಮಳೆ ನೀರು ಮೈಮೇಲೆ ಹಾರುವುದು ಮಾಮೂಲಾಗಿದೆ. ಜೋರಾಗಿ ಮಳೆ ಸುರಿದರೆ ಚರಂಡಿಯಲ್ಲಿ ಹರಿಯಬೇಕಾಗಿದ್ದ ಮಳೆ ನೀರು ರಸ್ತೆಯಲ್ಲೇ ಹರಿಯುವುದರಿಂದ ಸಾಲು ಸಾಲು ಸಮಸ್ಯೆ ಸೃಷ್ಟಿಯಾಗಿವೆೆ. ಕೆಲವೊಂದು ಬಾರಿ ವೇಗವಾಗಿ ಸಂಚರಿಸುವ ವಾಹನ ಸವಾರರು ಮಳೆ ನೀರು ತುಂಬಿದ ರಸ್ತೆ ಹೊಂಡದ ಬಗ್ಗೆ ಅರಿವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಬೈಕ್ ಸವಾರರು ಬಿದ್ದು ಗಾಯಗೊಂಡ ನಿದರ್ಶನವೂ ಬಹಳಷ್ಟಿದೆ.

ಬಹುತೇಕ ರಸ್ತೆಗಳಲ್ಲಿ ಸಮಸ್ಯೆ

ಪೈಪ್‌ಲೈನ್ ಕಾಮಗಾರಿ ಸಂದರ್ಭ ರಸ್ತೆ ಪಕ್ಕದಲ್ಲೇ ಹೊಂಡ ತೋಡಿದ ಪರಿಣಾಮ ಚರಂಡಿಗಳೆಲ್ಲವೂ ಮಾಯವಾಗಿದೆ. ಇನ್ನೂ ಹಲವು ಕಡೆಗಳಲ್ಲಿ ಚರಂಡಿಯಲ್ಲೇ ಹೊಂಡ ತೋಡಿ ಪೈಪ್ ಅಳವಡಿಸಿ ಬಳಿಕ ಮಣ್ಣು ಹಾಕಿದ ಕಾರಣ ಚರಂಡಿಯೇ ಇಲ್ಲದಂತಾಗಿದೆ. ಹೀಗಾಗಿ ಉಡುಪಿ-ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66 ಹಾಗೂ ಕಟಪಾಡಿಯಿಂದ ಬೆಳ್ಮಣ್ ಸಾಗುವ ರಾಜ್ಯ ಹೆದ್ದಾರಿ, ಪಡುಬಿದ್ರಿಯಿಂದ ಕಾರ್ಕಳ ಸಾಗುವ ರಾಜ್ಯ ಹೆದ್ದಾರಿ ಹಾಗೂ ಕಾರ್ಕಳದಿಂದ ಉಡುಪಿ ಸಾಗುವ ಹೆದ್ದಾರಿ ಸೇರಿ ಜಿಲ್ಲಾದ್ಯಂತ ಗ್ರಾಮೀಣ ಭಾಗದ, ಪಂಚಾಯಿತಿ ರಸ್ತೆಗಳು, ಜಿಪಂ ಹಾಗೂ ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ಬಹುತೇಕ ರಸ್ತೆ ಪಕ್ಕದ ಚರಂಡಿಗಳು ಮಾಯವಾಗಿದ್ದು ಸಮಸ್ಯೆಯಾಗುತ್ತಿದೆ.

ಹೊಂಡಗುಂಡಿ ನಿರ್ಮಾಣ

ಮಳೆ ನೀರು ರಸ್ತೆಯಲ್ಲೇ ಹರಿಯುವುದರಿಂದ ಬಹುತೇಕ ರಸ್ತೆಗಳಲ್ಲಿ ಹೊಂಡಗುಂಡಿ ನಿರ್ಮಾಣಗೊಂಡಿವೆ. ಹೊಂಡದಲ್ಲಿ ನಿಂತ ಕೆಸರು ನೀರಿನಿಂದ ಆವಾಂತರಗಳು ನಿತ್ಯ ನಡೆಯುತ್ತಿದೆ. ಕಟಪಾಡಿಯಿಂದ ಬೆಳ್ಮಣ್ ಸಂಪರ್ಕಿಸುವ ಸುಮಾರು 21 ಕಿ.ಮೀ ಉದ್ದದ ರಸ್ತೆಯೂ ಅಲ್ಲಲ್ಲಿ ಹೊಂಡಗುಂಡಿಗಳಿಂದ ಕೂಡಿದೆ. ಶಿರ್ವದಿಂದ ಕಟಪಾಡಿವರೆಗೂ ರಸ್ತೆಯಲ್ಲಿ ಅತಿ ಹೆಚ್ಚಿನ ಹೊಂಡಗಳು ನಿರ್ಮಾಣಗೊಂಡಿದ್ದು, ರಸ್ತೆಯೂ ತೀರಾ ಹದಗೆಟ್ಟಿದೆ. ಅಲ್ಲದೆ ಹೊಂಡ ಮುಚ್ಚಲು ಇಲಾಖೆ ಇತ್ತೀಚೆಗೆ ತೇಪೆ ಹಾಕಿದ ಡಾಂಬರು ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಬೃಹತ್ ಗಾತ್ರದ ಹೊಂಡ ನಿರ್ಮಾಣವಾಗಿದೆ. ಕಟಪಾಡಿಯಿಂದ ಶಿರ್ವ ಸಾಗುವ ರಸ್ತೆಯೂ ಪೂರ್ಣ ಡಾಂಬರು ಕಾಮಗಾರಿ ಆಗದೆ ದಶಕಗಳೇ ಸಮೀಪಿಸುತ್ತಿದೆ. ಈ ಭಾಗದ ಜನರ ಒತ್ತಾಯ ಹಾಗೂ ಆಕ್ರೋಶಕ್ಕೆ ಮಣಿದು ಇತ್ತೀಚೆಗೆ ಅಲ್ಲಲ್ಲಿ ಹೊಂಡಗಳಿಗೆ ತೇಪೆ ಕಾರ್ಯ ನಡೆದಿದ್ದು, ಮೊದಲ ಮುಂಗಾರಿಗೆ ತೇಪೆ ಎದ್ದು ಹೋಗಿದೆ.

ಚರಂಡಿ ಇದ್ದಲ್ಲಿ ನಿರ್ವಹಣೆಯಿಲ್ಲ

ಕೆಲವೊಂದು ಕಡೆ ಚರಂಡಿ ವ್ಯವಸ್ಥೆಗಳಿದ್ದರೂ ಹೂಳು ತೆಗೆದು ನಿರ್ವಹಣೆ ಮಾಡದ ಪರಿಣಾಮ ಮಳೆ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿಗಳು ಹಾಗೂ ಲೋಕೋಪಯೋಗಿ ಇಲಾಖೆಯೂ ಚರಂಡಿ ನಿರ್ವಹಣೆಯಲ್ಲಿ ತೊಡಗಿಕೊಂಡಂತೆ ಕಾಣುತ್ತಿಲ್ಲ.

ಅಲ್ಲಲ್ಲಿ ರಸ್ತೆಬದಿ ಅಗೆದು ಪೈಪ್‌ಲೈನ್ ಕಾಮಗಾರಿ ಮಾಡಿದ ಪರಿಣಾಮ ರಸ್ತೆ ಬದಿಯ ಚರಂಡಿ ಮಾಯವಾಗಿ ರಸ್ತೆಯಲ್ಲೇ ಮಳೆ ನೀರು ಹರಿಯುವುದರಿಂದ ನಡೆದಾಡುವುದೇ ಕಷ್ಟವಾಗಿದೆ. ವಾಹನಗಳು ಓಡಾಡುವ ಸಂದರ್ಭ ಕೆಸರು ನೀರಿನ ಅಭಿಷೇಕವಾಗುತ್ತದೆ.-ಪುನೀತ್ ವಿದ್ಯಾರ್ಥಿ ಶಿರ್ವ

ರಸ್ತೆಬದಿ ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿಯುವ ಪರಿಣಾಮ ಕಲ್ಲು, ಮಣ್ಣು ಎಲ್ಲವೂ ರಸ್ತೆಯಲ್ಲೇ ಶೇಖರಣೆಗೊಂಡು ವಾಹನ ಸವಾರರಿಗೂ ನಿತ್ಯ ಸಮಸ್ಯೆಯಾಗುತ್ತಿದೆ. ಅಪಘಾತಗಳಿಗೂ ಕಾರಣವಾಗುತ್ತಿದೆ.-ಸುರೇಶ್ ಪೂಜಾರಿ, ಗ್ರಾಮಸ್ಥರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net