

ಬೆಂಗಳೂರು:ಕರಾವಳಿ,ಮಲೆನಾಡು ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಗುರುವಾರವೂ ತೀವ್ರವಾಗಿ ಮಳೆಯಾದರೆ, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಬಹುತೇಕ ಸ್ಥಳಗಳಲ್ಲಿ ಸಾಧಾರಣವಾಗಿ ಸುರಿದಿದೆ.
ಉತ್ತರ ಕನ್ನಡದ ಗೇರುಸೊಪ್ಪ, ಮಂಕಿ, ಕಾರವಾರ ವೀಕ್ಷಣಾಲಯ, ಅಂಕೋಲಾ, ದಣ ಕನ್ನಡದ ಉಪ್ಪಿನಂಗಡಿ, ಪುತ್ತೂರು, ಉಡುಪಿಯ ಕುಂದಾಪುರ, ಸಿದ್ದಾಪುರ, ಉಡುಪಿ ನಗರ, ಕೋಟ ಮತ್ತು ಕೊಡಗಿನ ಭಾಗಮಂಡಲದಲ್ಲಿ 24 ಗಂಟೆ ಅವಧಿಯಲ್ಲಿ 100 ಮಿಮೀಗಿಂತ ಅಧಿಕ ವರ್ಷಧಾರೆಯಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು,ಕೊಡಗು, ಹಾಸನದಲ್ಲಿ ಮೇ 30ರಂದು ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಕೊಟ್ಟಿದೆ. ಕರಾವಳಿ ಪ್ರದೇಶಗಳಲ್ಲಿ ಪ್ರತಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಸಣ್ಣ ಹಡುಗು ಓಡಾಡಬಾರದು. ಸಮುದ್ರ ತೀರದ ಸಮೀಪ ಮನರಂಜನಾ ಚುಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸದಂತೆ ಇಲಾಖೆ ಸೂಚಿಸಿದೆ. ಬೀದರ್, ಕಲಬುರಗಿ, ಮೈಸೂರು, ಶಿವಮೊಗ್ಗದಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಜೂ 1ರಿಂದ ಮಳೆ ಇಳಿಕೆ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ, ಜೂ 1ರಿಂದ ತುಸು ಇಳಿಕೆಯಾಗುವ ಸಾಧ್ಯತೆ ಇದೆ. ಕೆಲವೆಡೆ ಮಾತ್ರ ಸಾಧಾರಣ ಪ್ರಮಾಣದಲ್ಲಿ ಸುರಿಯಬಹುದು. ಬೆಂಗಳೂರಿನಲ್ಲಿ ಮುಂದಿನ 48 ಗಂಟೆ ಮೋಡ ಕವಿದ ವಾತಾವರಣ ಇರಲಿದೆ. ಪ್ರತಿ ಗಂಟೆಗೆ 40- 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಡಿ.ಸೆ. ಮತ್ತು 20 ಡಿ.ಸೆ.ಇರಲಿದೆ.