ರಾಜ್ಯದಲ್ಲಿ 2 ದಿನ ಮಳೆ:ಮಲೆನಾಡು,ಕರಾವಳಿಯಲ್ಲಿ ಜೋರು

rain
Published on

ಬೆಂಗಳೂರು:ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ಕರಾವಳಿ, ಮಲೆನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಎರಡು ದಿನ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಸೆ.10ರಿಂದ ಸೆ.11ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್​ ನೀಡಿದೆ. ಆದರೆ, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆ ಸುರಿಯಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮೋಡ ಕವಿದ ಆಕಾಶ ಇರಲಿದೆ.ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30 ಡಿ.ಸೆ.ಮತ್ತು 21 ಡಿ.ಸೆ.ಉಷ್ಣಾಂಶ ಇರಲಿದೆ.

20 ದಿನ ಬಾಕಿ: ಈ ಬಾರಿ ಮುಂಗಾರು ಮುಗಿಯಲು 20 ದಿನಗಳಿವೆ.ಹಂತ ಹಂತವಾಗಿ ಈಗಾಗಲೇ ಮಳೆ ತುಸು ಕ್ಷೀಣವಾಗುತ್ತಿದೆ.ಅ.1ರಿಂದ ರಾಜ್ಯದಲ್ಲಿ ಹಿಂಗಾರು (ಈಶಾನ್ಯ ಮಾನ್ಸೂನ್​) ಶುರುವಾಗಲಿವೆ.ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕ ಕೆಲ ಭಾಗಗಳಲ್ಲಿ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮಾಹಿತಿ ನೀಡಿದೆ. ಜೂ 1ರಿಂದ ಸೆ.9ರವರೆಗೆ ರಾಜ್ಯಾದ್ಯಂತ ವಾಡಿಕೆಗಿಂತ ಅಧಿಕ ಮಳೆಯಾಗಿದೆ. 733 ಮಿಮೀ ಮಳೆ ಬದಲಾಗಿ 902 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.23 ಅಧಿಕ ವರ್ಷಧಾರೆಯಾಗಿದೆ.

ಕರಾವಳಿಯಲ್ಲಿ ಅಧಿಕ: ಮಲೆನಾಡು, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕಗಿಂತ ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಈ ಬಾರಿ ಅಧಿಕ ಮಳೆ ಸುರಿದಿರುವುದು ಗಮನಾರ್ಹ. ಜೂ.1ರಿಂದ ಸೆ.9ರವರೆಗೆ 2,909 ಮಿಮೀ ಮಳೆ ಆಗಬೇಕಿತ್ತು. ಆದರೆ, 3,503 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.20 ಅಧಿಕವಾಗಿ ಬಿದ್ದಿದೆ. ಮಲೆನಾಡಲ್ಲಿ 1,655 ಮಿಮೀ, ಉತ್ತರ ಕರ್ನಾಟಕ ಭಾಗದಲ್ಲಿ 477 ಮಿಮೀ, ದಕ್ಷಿಣ ಕರ್ನಾಟಕ ಭಾಗದಲ್ಲಿ 368 ಮಿಮೀ ಮಳೆಯಾಗಿದೆ. ಈ ಅವಧಿಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಳ್ಳೆಯ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net