ಗುಳೇದಗುಡ್ಡ: ಪಟ್ಟಣದಲ್ಲಿ ಎಷ್ಟೇ ಜೋರಾಗಿ ಚುನಾವಣೆಗಳು ನಡೆದರೂ ಮರುದಿನ ಎಲ್ಲ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸೌಹಾರ್ದಯುತವಾಗಿರುತ್ತಾರೆ. ಅಂತಹ ಊರಿನಲ್ಲಿ ಅಶಾಂತಿ ಸೃಷ್ಟಿಗೆ ಲಾಂಗು, ಮಚ್ಚು ತಂದಿದ್ದು ಕಪ್ಪು ಚುಕ್ಕೆಯಾಗಿದೆ ಎಂದು ಕೆಪಿಸಿಸಿ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು 5-6 ವಿಧಾನಸಭೆ ಚುನಾವಣೆ, 8ಕ್ಕೂ ಹೆಚ್ಚು ಪುರಸಭೆ, ಜೊತೆಗೆ ಜಿಪಂ, ತಾಪಂ, ಲೋಕಸಭೆ ಚುನಾವಣೆಗಳನ್ನು ಮಾಡಿದ್ದೇವೆ. ಒಮ್ಮೆಯೂ ಈ ರೀತಿ ಚುನಾವಣೆಗಳಲ್ಲಿ ಅಶಾಂತಿ ಸೃಷ್ಟಿಸಲು ಗುಂಡಾಗಳನ್ನು ಕರೆಯಿಸಿ. ಅಂತಹ ಘಟನೆಗಳಿಗೆ ಅವಕಾಶವನ್ನೇ ಕೊಟ್ಟಿಲ್ಲ ಎಂದು ತಿಳಿಸಿದರು.
ಪುರಸಭೆ ಚುನಾವಣೆಯಲ್ಲಿ ಅಶಾಂತಿ ಸೃಷ್ಟಿಗೆ ಮುಂದಾಗಿದ್ದು, ನಾನು, ಮೇಟಿಯವರು, ಶೀಲವಂತರು ಬೇರೆ ಬೇರೆ ಪಕ್ಷಗಳಲ್ಲಿ ಇದ್ದು, ಚುನಾವಣೆಯಲ್ಲಿ ಎದುರಾಳಿಗಳಿದ್ದರೂ ಚುನಾವಣೆ ನಂತರ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತ ಬಂದಿದ್ದೇವೆ. ಒಮ್ಮೆಯೂ ಇಂಥ ಘಟನೆಗಳಿಗೆ ಅವಕಾಶ ನೀಡಿಲ್ಲ. ನಾನು ಈ ಹಿಂದೆ ಶಾಸಕನಾಗಿದ್ದ ಸಮಯದಲ್ಲಿ ಸಾರ್ವಜನಿಕ ವಿಷಯವಾಗಿ ಜಗಳವಾದಾಗ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಮೇಲಾಗಿದ್ದ ಪ್ರಕರಣಗಳನ್ನು ತೆಗೆಸುವಂತೆ ಎರಡೂ ಪಕ್ಷದವರು ಮನವಿ ಮಾಡಿದ್ದರು. ಆಗ ನಾನೇ ಬಂಗಾರಪ್ಪನವರ ಬಳಿ ಹೋಗಿ ಪ್ರಕರಣ ತೆಗೆಸಿದ್ದೆ. ನಾನಷ್ಟೇ ಅಲ್ಲ ಇಡೀ ಗುಳೇದಗುಡ್ಡದ ಎಲ್ಲ ಪಾರ್ಟಿಯವರು ಅನ್ಯೋನ್ಯವಾಗಿದ್ದಾರೆ. ಚುನಾವಣೆಗಳಲ್ಲಿ ಅಷ್ಟೇ ವಿರುದ್ಧ ಮಾಡುತ್ತಾರೆ. ಅದು ಮುಗಿದ ನಂತರ ಎಲ್ಲರೂ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತ ಬಂದಿದ್ದಾರೆ ಎಂದು ಹೇಳಿದರು.
ಗುಳೇದಗುಡ್ಡವು ಭಾವನಾತ್ಮಕ ಪಟ್ಟಣವಾಗಿದೆ. ಕೂಡಲೇ ನಾನು ಈ ಬಗ್ಗೆ ಎಸ್.ಪಿ. ಅವರನ್ನು ಭೇಟಿಯಾಗಿ ಚರ್ಚೆ ನಡೆಸುತ್ತೇನೆ. ಇಂತಹ ಘಟನೆಗಳು ಇನ್ನೂ ಮುಂದೆ ನಡೆಯಬಾರದೆಂದು ತಿಳಿಸಿದರು. ಸಂಜಯ ಬರಗುಂಡಿ, ರಾಜು ಸಂಗಮ, ಹುಚ್ಚೇಶ ಕಲಕೇರಿ ಇದ್ದರು.