

ಬೆಂಗಳೂರು: ದ್ವಿಚಕ್ರ ವಾಹನಗಳ ಮುಖಾಮುಖಿ ಅಪಘಾತದಲ್ಲಿ ಒಬ್ಬ ಸವಾರ ಮೃತಪಟ್ಟಿದ್ದು, ಇಬ್ಬರಿಗೆ ಗಾಯವಾಗಿದೆ.
ಪಟ್ಟೆಗಾರಪಾಳ್ಯದ ಮಿಥುನ್ (18) ಮೃತ ಸವಾರ. ಮತ್ತಿಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ವರ್ಷದಿಂದ ವಿಜಯವಾಣಿ ಪತ್ರಿಕಾ ವಿತರಕನಾಗಿದ್ದ ಮಿಥುನ್, ಸೋಮವಾರ ಬೆಳಗಿನ ಜಾವ ಮನೆ ಮನೆಗೆ ಪತ್ರಿಕೆ ವಿತರಿಸಿ ದ್ವಿಚಕ್ರ ವಾಹನದಲ್ಲಿ ಸ್ನೇಹಿತರನ ಜತೆಗೆ ಮನೆಗೆ ವಾಪಸ್ ಆಗುತ್ತಿದ್ದ. ಮೂಡಲಪಾಳ್ಯ ರಸ್ತೆಯಲ್ಲಿ ಆಯತಪ್ಪಿ ಎದುರಿಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಗುದ್ದಿದ ರಭಸಕ್ಕೆ ಮೂವರು ಗಾಯಗೊಂಡಿದ್ದರು. ಸ್ಥಳೀಯರು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಮಿಥುನ್ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸಂಬಂಧ ವಿಜಯನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.