ಮಂಡ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಸಂಸದೆ ಸುಮಲತಾ ಬೆಂಬಲ ಯಾರಿಗೆ? ಇಲ್ಲಿದೆ ಸುಳಿವು...

Sumalatha 4 dec 19
Published on

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ವಿಧಾನ ಪರಿಷತ್ ಚುನಾವಣಾ ಅಖಾಡ ರಂಗೇರಿದೆ. ಕಾಂಗ್ರೆಸ್​, ಬಿಜೆಪಿ ಮತ್ತು ಜೆಡಿಎಸ್​ ಮೂರು ಪಕ್ಷಗಳು ಗೆಲುವಿನ ಜಿದ್ದಾಜಿದ್ದಿಗೆ ಬಿದ್ದಿದ್ದು, ಗೆಲುವಿನ ತಂತ್ರಗಳನ್ನು ಎಣೆಯುತ್ತಿವೆ. ಇದರ ನಡುವೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್​ ಬೆಂಬಲ ಯಾರಿಗೆ ಎಂಬ ಕುತೂಹಲವು ಮನೆ ಮಾಡಿದೆ.

ಸುಮಲತಾ ನಡೆ ಇದುವರೆಗೂ ನಿಗೂಢವಾಗಿಯೇ ಉಳಿದಿತ್ತು. ಆದರೆ, ಇದೀಗ ಬಂದಿರುವ ಸುದ್ದಿಯ ಪ್ರಕಾರ ಸುಮಲತಾ ಅವರು ಕಾಂಗ್ರೆಸ್​ಗೆ ಪರೋಕ್ಷವಾಗಿ ಬೆಂಬಲ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣ ಕೈ ಅಭ್ಯರ್ಥಿ ದಿನೇಶ್ ಗೂಳಿಗೌಡ ಪರ ಸುಮಲತಾ ಆಪ್ತರು ಪ್ರಚಾರ ಮಾಡುತ್ತಿರುವುದು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರೋಕ್ಷ ಬೆಂಬಲ ನೀಡಿದಂತೆ ಸುಮಲತಾ ಪರೋಕ್ಷ ಬೆಂಬಲ ನೀಡಲಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಸುಮಲತಾ ಅವರು ಆಪ್ತರು ಹಾಗೂ ಬೆಂಬಲಿಗರನ್ನು ಮುಂದೆ ಬಿಟ್ಟು ಪರೋಕ್ಷವಾಗಿ ಕಾಂಗ್ರೆಸ್ ಪರ ನಿಂತಿದ್ದಾರೆ. ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆನ್ನಲ್ಲಾಗಿದೆ.

ದಿನೇಶ್ ಗೂಳಿಗೌಡ ಪ್ರಚಾರ ಸಭೆಯಲ್ಲಿ ಸುಮಲತಾ ಆಪ್ತ ಬೇಲೂರು ಸೋಮಶೇಖರ್ ಭಾಗಿಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನೇರವಾಗಿ ಬೆಂಬಲ ನೀಡಿದ್ದ ಬಿಜೆಪಿಗೆ ಸುಮಲತಾ ಕೈ ಕೊಟ್ರಾ ಎಂಬ ಅನುಮಾನ ಮೂಡಿದೆ. ಚುನಾವಣೆಯಲ್ಲಿ ಅಭ್ಯರ್ಥಿ ಹಾಕದೇ ಸುಮಲತಾಗೆ ಬಹಿರಂಗವಾಗಿ ಬಿಜೆಪಿ ಬೆಂಬಲ ನೀಡಿತ್ತು. ಸುಮಲತಾ ಬೆಂಬಲದ ನಿರೀಕ್ಷೆಯಲ್ಲಿದ್ದ ಕಮಲ ಪಡೆಗೆ ಇದೀಗ ಶಾಕ್ ಆಗಿದೆ.

ತಟಸ್ಥವಾಗಿ ಉಳಿಯುವುದಾಗಿ ಘೋಷಣೆ ಮಾಡಿ ತೆರೆ ಹಿಂದಿನ ರಾಜಕೀಯಕ್ಕೆ ಸುಮಲತಾ ಮುಂದಾಗಿದ್ದಾರೆಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net