ಆಸ್ತಿಗಾಗಿ ಖಾಲಿ ಪತ್ರಕ್ಕೆ ಶವದ ಹೆಬ್ಬೆಟ್ಟು ಒತ್ತಿಕೊಂಡ್ರು! ಮೈಸೂರಲ್ಲಿ ಅಜ್ಜಿ ಶವದ ಎದುರೇ ಮಹಾ ವಂಚನೆ, ವಿಡಿಯೋ ವೈರಲ್​

1195321
Published on

ಮೈಸೂರು: ಸತ್ತು ಮಲಗಿರುವ ವೃದ್ಧೆಯ ಅಂತ್ಯಸಂಸ್ಕಾರ ಇನ್ನು ಕೆಲವೇ ಕ್ಷಣದಲ್ಲಿ ನಡೆಯಬೇಕು ಅನ್ನುವಷ್ಟರಲ್ಲಿ ಹೆಣದ ಮುಂದೆಯೇ ಮಹಾ ವಂಚನೆ ನಡೆದಿದೆ. ಕೆಲವರು ವೃದ್ಧೆಯ ಆಸ್ತಿಗಾಗಿ ಖಾಲಿ ಬಾಂಡ್ ಪೇಪರ್‌ಗೆ ಮೃತಳ ಹೆಬ್ಬೆಟ್ಟಿನ ಮುದ್ರೆ ಒತ್ತಿಕೊಂಡಿದ್ದು, ವಿಡಿಯೋ ವೈರಲ್​ ಆಗಿದೆ.

ಇಂತಹ ಅಮಾನವೀಯ ಘಟನೆ ಮೈಸೂರು ತಾಲೂಕಿನ ಶ್ರೀರಾಂಪುರದಲ್ಲಿ ಸಂಭವಿಸಿದೆ. ಮೃತರ ಹೆಬ್ಬೆಟ್ಟಿನ ಗುರುತು ಪಡೆದು ಆಸ್ತಿ ಲಪಟಾಯಿಸುವುದು ಕಾನೂನು ಪ್ರಕಾರ ತಪ್ಪು. ಆದರೂ ಮೃತರ ಕುಟುಂಬಕ್ಕೆ ಸಂಬಧಿಸಿದ ಮಹಿಳೆಯೊಬ್ಬರು ತನ್ನ ಕಡೆಯವರ ಜತೆ ಬಂದು ಹತ್ತಾರು ಖಾಲಿ ಬಾಂಡ್​ ಪೇಪರ್​ಗಳಿಗೆ ಶವದ ಹೆಬ್ಬೆಟ್ಟಿಂದ ಸಹಿ ಒತ್ತಿಕೊಂಡಿದ್ದಾರೆ.

ಹೀಗೆ ಮಾಡುವುದು ತಪ್ಪು ಎಂದು ಸ್ಥಳದಲ್ಲೇ ಇದ್ದ ಸಂಬಂಧಿಕರು ಎಷ್ಟೇ ಹೇಳಿದರೂ ವಾದಿಸಿದ್ದಾರೆ. ಅಲ್ಲದೆ ಇದು ತಪ್ಪು ಎಂದು ವಿರೋಧಿಸಿದ ಮಹಿಳೆಯ ಜತೆಗೂ ಕೆಲಕಾಲ ಮಾತಿನ ಚಕಮಕಿ ನಡೆದಿದೆ. ಬಳಿಕ ಖಾಲಿ ಪತ್ರಗಳನ್ನು ಸಂಬಂಧಿಕರು ಪಕ್ಕದಲ್ಲೇ ಇರುವ ತಮ್ಮ ಮನೆಗೆ ರವಾನಿಸಿದ್ದಾರೆ. ಶವದ ಬಳಿ ನಿಂತು ಖಾಲಿ ಪತ್ರಕ್ಕೆ ಹೆಬ್ಬೆಟ್ಟು ಒತ್ತಿಕೊಂಡ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net