

ಮೈಸೂರು: ಆಸ್ತಿಗಾಗಿ ಶವದ ಹೆಬ್ಬೆಟ್ಟಿನ ಮುದ್ರೆಯನ್ನು ಸಂಬಂಧಿಕರು ಖಾಲಿ ಪತ್ರದ ಮೇಲೆ ಒತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ವೈರಲ್ ವಿಡಿಯೋದ ಅಸಲಿ ಕತೆ.
ಮೈಸೂರು ತಾಲೂಕಿನ ಶ್ರೀರಾಂಪುರದಲ್ಲಿ ಸತ್ತು ಮಲಗಿದ್ದ ವೃದ್ಧೆಯ ಅಂತ್ಯಸಂಸ್ಕಾರ ಇನ್ನು ಕೆಲವೇ ಕ್ಷಣದಲ್ಲಿ ನಡೆಯಬೇಕು ಅನ್ನುವಷ್ಟರಲ್ಲಿ ಹೆಣದ ಮುಂದೆಯೇ ಸಂಬಂಧಿಕರು ಹತ್ತಾರು ಖಾಲಿ ಬಾಂಡ್ ಪತ್ರಗಳನ್ನ ತಂದು ಹೈಡ್ರಾಮ ಮಾಡಿದ್ದರು. ಖಾಲಿ ಪೇಪರ್ಗೆ ಮೃತಳ ಹೆಬ್ಬೆಟ್ಟಿನ ಮುದ್ರೆ ಒತ್ತಿಕೊಂಡಿದ್ದರು. ಹೀಗೆ ಮಾಡುವುದು ತಪ್ಪು ಎಂದು ಸ್ಥಳದಲ್ಲೇ ಇದ್ದ ಮತ್ತೊಬ್ಬ ಮಹಿಳೆ ಎಷ್ಟೇ ಹೇಳಿದರೂ ವಾದಿಸಿದ್ದರು. ಬಳಿಕ ಖಾಲಿ ಪತ್ರಗಳನ್ನು ಸಂಬಂಧಿಕರು ಪಕ್ಕದಲ್ಲೇ ಇರುವ ತಮ್ಮ ಮನೆಗೆ ರವಾನಿಸಿದ್ದರು. ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದ ಈ ಎಲ್ಲ ದೃಶ್ಯ ವೈರಲ್ ಆಗಿದೆ. ಅಂದಹಾಗೆ ಸಂಬಂಧಿಕರು ಖಾಲಿ ಪತ್ರಕ್ಕೆ ಹೆಬ್ಬೆಟ್ಟು ಒತ್ತಿಕೊಂಡದ್ದು ಜಯಮ್ಮ(63) ಎಂಬುವವರಿಂದ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಜಯಮ್ಮ 11 ದಿನದ ಹಿಂದೆ ಮೃತಪಟ್ಟಿದ್ದಾರೆ. ಜಯಮ್ಮನ ಕುಟುಂಬಕ್ಕೆ ಪಿತ್ರಾರ್ಜಿತವಾಗಿ 14 ಎಕರೆ ಆಸ್ತಿ ಇತ್ತು. ಮದುವೆಯಾದ ಹೊಸದರಲ್ಲೇ ಜಯಮ್ಮ ಪತಿಯಿಂದ ದೂರವಾಗಿದ್ದರು. ಈಗ ಆಸ್ತಿಯ ಪಾಲು ಪಡೆಯಲು ಪತಿಯೂ ಬದುಕಿಲ್ಲ, ಮಕ್ಕಳೂ ಇಲ್ಲ.
ಜಯಮ್ಮನ ಪಾಲಿನ ಪಿತ್ರಾರ್ಜಿತ ಆಸ್ತಿಗಾಗಿ ತವರು ಮನೆಯಲ್ಲಿ ಗೊಂದಲ ಉಂಟಾಗಿದೆ. ಜಯಮ್ಮನಿಗೆ ಇಬ್ಬರು ಅಕ್ಕಂದಿರು, ಒಬ್ಬ ತಮ್ಮ ಇದ್ದಾರೆ. ಜಯಮ್ಮ ಬದುಕಿದ್ದಾಗ ಯಾರೂ ನೋಡಿಕೊಳ್ಳಲಿಲ್ಲ. ಸತ್ತಾಗ ಆಸ್ತಿ ವಿವಾದ ಬಟಾಬಯಲಾಗಿದೆ. ಅಕ್ಕನ ಮಗನಿಂದ ಆಸ್ತಿಗಾಗಿ ಶವದ ಹೆಬ್ಬೆಟ್ಟಿಂದ ಬಾಂಡ್ ಪೇಪರ್ ಮೇಲೆ ಮುದ್ರೆ ಒತ್ತಿಸಿಕೊಳ್ಳಲಾಗಿದೆ. (ದಿಗ್ವಿಜಯ ನ್ಯೂಸ್)