More

    ಜನರಿಗೆ ಆಸ್ತಿ ತೆರಿಗೆ ಭಾರದ ಗ್ಯಾರಂಟಿ ಕಾಂಗ್ರೆಸ್ ಸರ್ಕಾರದಿಂದ ಆಘಾತ  ಆದೇಶ ಹಿಂಪಡೆಯಲು ಬಿಜೆಪಿ ಆಗ್ರಹ

    ದಾವಣಗೆರೆ: ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಬರಗಾಲದ ವೇಳೆಯೂ ಸಾರ್ವಜನಿಕರ ಮೇಲೆ ತೆರಿಗೆ ಹೊರೆಯ ಗ್ಯಾರಂಟಿ ಕಲ್ಪಿಸಿದೆ ಎಂದು ನಗರಪಾಲಿಕೆ ವಿಪಕ್ಷನಾಯಕ ಕೆ.ಪ್ರಸನ್ನಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
    ಸ್ಥಿರಾಸ್ತಿಯ ಮಾರ್ಗಸೂಚಿ ಬೆಲೆಯನ್ನು ಶೇ.50ರಿಂದ ಶೇ.100ರಷ್ಟು ಹೆಚ್ಚಿಸಿ, 2023ರ ಅ. 1ರಂದು ಆದೇಶ ಹೊರಡಿಸಲಾಗಿದೆ. ದಾವಣಗೆರೆ ಉಪ ನೊಂದಣಾಧಿಕಾರಿ ಕಚೇರಿ ಮೂಲಕ ವಿವಿಧ ಬಡಾವಣೆಗಳ ಸಬ್ ರಿಜಿಸ್ಟ್ರಾರ್ ದರದ ಮಾನದಂಡದಡಿ ಆಸ್ತಿ ತೆರಿಗೆ ದುಪ್ಪಟ್ಟು ಹೆಚ್ಚಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
    ಏಪ್ರಿಲ್‌ನಿಂದ ಅನ್ವಯವಾದ ಈ ದರ, ಕಂದಾಯ ಕಟ್ಟಲು ಹೋಗುತ್ತಿರುವ ಜನರಿಗೆ ಅನುಭವವಾಗುತ್ತಿದೆ. ಕಾಂಗ್ರೆಸ್, ನಗರಪಾಲಿಕೆ ಬಜೆಟ್‌ಗಾತ್ರ ಹೆಚ್ಚಿಸಿದ್ದರ ಹಿಂದೆ ತೆರಿಗೆ ಹೆಚ್ಚಿಸುವ ಉದ್ದೇಶದ ಬಗ್ಗೆಯೂ ಪಾಲಿಕೆಯ ಬಿಜೆಪಿ ಸದಸ್ಯರು ಪ್ರಶ್ನಿಸಿದ್ದರೂ ಸೂಕ್ತ ಉತ್ತರ ಬಂದಿರಲಿಲ್ಲ ಎಂದು ಹೇಳಿದರು.
    ಸರ್ಕಾರದಲ್ಲಿ ಖಾಲಿಯಾಗಿರುವ ಖಜಾನೆ ತುಂಬಲು ಜನರಿಗೆ ಬೆಲೆ ಏರಿಕೆಯ ಹೊರೆ ಹೇರಲಾಗುತ್ತಿದೆ. ಖಾಲಿ ನಿವೇಶನ, ಕಟ್ಟಡ ಹಾಗೂ ಜಮೀನುಗಳ ಮೇಲೆಯೂ ತೆರಿಗೆ ಹೆಚ್ಚಿಸಲಾಗಿದೆ. ಇದರ ಮೂಲಕ ಸಾರ್ವಜನಿಕರ ಹಣ ಲೂಟಿ ಮಾಡಲು ಹೊರಟಿದೆ. ಗ್ಯಾರಂಟಿ ಹೆಸರಲ್ಲಿ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳಲು ಹೊರಟಿದೆ ಎಂದು ಟೀಕಿಸಿದರು.
    ವಿದ್ಯಾನಗರ ಆಂಜನೇಯ ದೇವಸ್ಥಾನದ ಸಮೀಪ ಇದುವರೆಗೆ ಆಸ್ತಿ ತೆರಿಗೆ 10 ಸಾವಿರ ರೂ. ಇತ್ತು. ಈಗದು 20 ಸಾವಿರ ರೂ. ಆಗಿದೆ. ಪಿ.ಜೆ. ಬಡಾವಣೆಯಲ್ಲಿ ಕಳೆದ ಬಾರಿ 17 ಸಾವಿರ ರೂ. ಕಟ್ಟಿದವರು 30 ಸಾವಿರ ರೂ, ಭರಿಸಬೇಕಿದೆ. ಎವಿಕೆ ಕಾಲೇಜು ರಸ್ತೆಯ ಮನೆಯೊಂದಕ್ಕೆ 35ಸಾವಿರ ರೂ. ತೆರಿಗೆ ಇತ್ತು. ಈಗ ಅದು 65 ಸಾವಿರ ರೂ.ಗೆ ಹೆಚ್ಚಳವಾಗಿದೆ. ಶ್ರಮಿಕರೇ ವಾಸಿಸುವ ಯಲ್ಲಮ್ಮನಗರದ 600 ಚದರಡಿ ಮನೆಗೂ ಸಹ ಈ ಹಿಂದೆ 3592 ರೂ. ಇತ್ತು. ಈಗ 8372 ರೂ.ಗೆ ಹೆಚ್ಚಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಹೇಳಿದರು.
    ಹಿಂದಿನ ಮಾರ್ಗಸೂಚಿ ಬೆಲೆಯನ್ವಯ ಆಸ್ತಿ ತೆರಿಗೆ ಸಂಗ್ರಹಿಸಬೇಕು. ಈ ಮಾಸಾಂತ್ಯದವರೆಗೆ ಆಸ್ತಿ ತೆರಿಗೆ ಕಟ್ಟಿದ್ದಲ್ಲಿ ಶೇ.5ರಷ್ಟು ರಿಯಾಯಿತಿ ಕಲ್ಪಿಸಿರುವ ಕ್ರಮವನ್ನು 60 ದಿನಗಳ ಕಾಲ ವಿಸ್ತರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ನಗರಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
    ಪಾಲಿಕೆ ಸದಸ್ಯ ಎಸ್.ಟಿ.ವೀರೇಶ್ ಮಾತನಾಡಿ ಆಸ್ತಿ ನೋಂದಣಿ ಸ್ಟಾಂಪ್ ಡ್ಯೂಟಿ, ಮದ್ಯದ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ದುಪ್ಪಟ್ಟು ಮಾಡಿದೆ. ಇದೊಂದು ಅಮಾನವೀಯ ಮತ್ತು ಅವೈಜ್ಞಾನಿಕ ಕ್ರಮವಾಗಿದೆ. ಕೂಡಲೆ ಜಿಲ್ಲಾ ಸಚಿವರು, ಶಾಸಕರಿಗೆ ಜನಪರ ಕಾಳಜಿ ಇದ್ದಲ್ಲಿ ತೆರಿಗೆ ಭಾರ ಇಳಿಸಬೇಕು ಎಂದು ಹೇಳಿದರು.
    ಎಪಿಎಂಸಿ ಮಳಿಗೆದಾರರು ಮಳಿಗೆಗೆ ಕಳೆದ ಜುಲೈನಲ್ಲಿ 17777 ರೂ. ಆಸ್ತಿ ತೆರಿಗೆ ಕಟ್ಟಿದ್ದರು. ಈ ಬಾರಿ 30,300 ರೂ ತೆರಬೇಕಾಗಿದೆ.  ಶೇ.30ರಿಂದ 70ರಷ್ಟು ತೆರಿಗೆ ಹೆಚ್ಚಿಸಲಾಗಿದೆ. ಜಿಲ್ಲಾಡಳಿತ ಹೊಸ ತೆರಿಗೆ ವ್ಯವಸ್ಥೆ ತಡೆಹಿಡಿಯಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು.
    ಪಾಲಿಕೆ ಸದಸ್ಯ ಆರ್. ಶಿವಾನಂದ್ ಮಾತನಾಡಿ ಸಾರ್ವಜನಿಕ ನಳದಲ್ಲಿ ಪೂರೈಸಲಾಗುವ ನೀರಿಗೆ ಈ ಹಿಂದೆ 2345 ರೂ. ಕಟ್ಟುವ ಜಾಗದಲ್ಲಿ ಈ ಬಾರಿ 4900 ರೂ. ಕಟ್ಟಬೇಕಿದೆ. ಸಮರ್ಪಕವಾಗಿ ನೀರು ಕೊಡದ ಪಾಲಿಕೆ ನೀರಿನ ಹೆಚ್ಚಿನ ಶುಲ್ಕ ಪಡೆಯುವುದು ಸರಿಯಲ್ಲ. ಜಿಲ್ಲಾ ಸಚಿವರು ತೆರಿಗೆ ನೀತಿ ಬಗ್ಗೆ ತಮ್ಮ ನಿಲುವು ಪ್ರಕಟಿಸಬೇಕು. ಇಲ್ಲವಾದಲ್ಲಿ ಸಚಿವರ ಮನೆ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು  ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಕೆ.ಎಂ. ವೀರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts