

ಬೆಂಗಳೂರು: ಬಿಳಗಿರಿ ರಂಗನ ಬೆಟ್ಟದಲ್ಲಿನ ಬುಡಕಟ್ಟು ಜನಾಂಗಕ್ಕೆ ಸೇರಿದ ಸೋಲಿಗರು ಬೆಳೆಯುವ ಕಾಫಿ ಬೆಳೆ ಮೌಲ್ಯವರ್ಧನೆ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.
ಬುಧವಾರ ವಿಧಾನಸೌಧದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಪನ್ನ ಅನಾವರಣಗೊಳಿಸಿದರು.
TRI, FOLKLORE ಎಂಬ ಎರಡು ಪ್ರಮುಖ ಬ್ರಾಂಡ್‌ಗಳಿದ್ದು, ಅವುಗಳ ಜತೆ ಕಾಳುಮೆಣಸೂ ಸಹ ಇದೆ. ಕೆಲವೇ ದಿನಗಳಲ್ಲಿ ಇವು ಇ-ಕಾಮರ್ಸ್ ವೇದಿಕೆಗಳಾದ ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ನಲ್ಲೂ ಸಹ ಲಭ್ಯವಾಗಲಿದೆ.
ಕಾಫಿಬೋರ್ಡ್, ವಾಲ್ಮೀಕಿ ನಿಗಮ ಜಂಟಿ ಸಹಕಾರದಲ್ಲಿ ಸೋಲಿಗರೇ ರಚಿಸಿಕೊಂಡ ರೈತರ ಉತ್ಪಾದಕ ಸಂಘ ರಚಿಸಿಕೊಂಡು ಅದಕ್ಕೆ ಕಂಪನಿ ರೂಪಕೊಡಲಾಗಿದೆ. ಸೋಲಿಗರು ಬೆಳೆದ ಕಾಫಿಯನ್ನು ಖರೀದಿ ಮಾಡಿ, ಸಂಸ್ಕರಣೆ ಮಾಡಿ, ಅಚ್ಚುಕಟ್ಟಾದ ಪ್ಯಾಕಿಂಗ್ ಮಾಡಿ ಅದನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.
ಈ ಪದಾರ್ಥದ ಬಗ್ಗೆ ವಿಜಯವಾಣಿಗೆ ವಿವರಣೆ ನೀಡಿದ ಕಂಪನಿ ಸಿಇಒ ಮಹೇಶ್, ಈ ಕಂಪನಿ ಮೂಲಕ ಸೋಲಿಗ ಸಮುದಾಯಕ್ಕೆ ಸೇರಿದ ಚಿಕ್ಕಪುಟ್ಟ ರೈತರು ಬೆಳೆಯುವ ಕಾಫಿಯನ್ನು ಖರೀದಿ ಮಾಡಿ ಅವರಿಗೆ ನ್ಯಾಯಯುತ ಮಾರುಕಟ್ಟೆ ಬೆಲೆ ನೀಡಲಾಗುತ್ತದೆ. ತೂಕದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಕೊಂಡುಕೊಂಡು, ಪರಿಷ್ಕರಿಸಿ ಮಾಡಿ ಒಂದು ಉತ್ತಮ ಪ್ರಾಡಕ್ಟ್ ಸಿದ್ಧಪಡಿಸಲಾಗಿದೆ ಎಂದರು.
ರೈತರಿಗೆ ಉತ್ತಮ ಬೆಲೆ ಸಿಗುವ ಜತೆಗೆ ಕಂಪೆನಿಯ ಷೇರುದಾರರೂ ಆಗಿರುವುದರಿಂದ ಅವರಿಗೆ ಡಿವಿಡೆಂಡ್, ಇನ್ಸೆಂಟಿವ್ ಕೂಡ ಸಿಗಲಿದೆ. ಮುಂದಿನ ದಿನಗಳಲ್ಲಿ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶವಿದೆ ಎಂದು ಹೇಳಿದರು.
ಅಂದಹಾಗೆ ಈ ಮೌಲ್ಯವರ್ಧಿತ ಉತ್ಪನ್ನದ ಹಿಂದೆ ದೊಡ್ಡದೊಂದು ಯಶೋಗಾಥೆ ಇದೆ. ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ಸೋಲಿಗರಿಗೆ ಸರ್ಕಾರ ಜಮೀನಿನ ಹಕ್ಕು ನೀಡಿತ್ತು. ಈ ಜಾಗದಲ್ಲಿ ಕಾಫಿ ಬೆಳೆಯುತ್ತಿದ್ದ ಸೋಲಿಗರು ಇಳುವರಿ ಇಲ್ಲದೇ, ಗುಣಮಟ್ಟವೂ ಇಲ್ಲದ ಕಾಫಿ ಬೆಳೆಯುತ್ತಿದ್ದರು. ಬಳಿಕ ಕೇಂದ್ರ ಸರ್ಕಾರದ ಅಧೀನದ ಕಾಫಿಬೋರ್ಡ್ ಪ್ರವೇಶ ಮಾಡಿ, ಅವರಿಗೆ ತಾಂತ್ರಿಕ ಸಲಹೆ ನೀಡಿ ಪ್ರೋತ್ಸಾಹಿಸಿತು. ಹೀಗೆ ರೂಪು ಪಡೆದುಕೊಂಡಿದ್ದರ ಪರಿಣಾಮ ಕಳೆದ ಆರ್ಥಿಕ ವರ್ಷದಲ್ಲಿ ಈ ಸೋಲಿಗರ ಕಂಪನೆ 1.7 ಕೋಟಿ ರೂ. ಕಾಫಿಯನ್ನು ಮಾರಾಟಮಾಡಿತು. ಒಂದು ಭಾಗ ವಿದೇಶಕ್ಕೂ ರಫ್ತಾಯಿತು.
ಮುಂದಿನ ಬೆಳವಣಿಗೆಯಲ್ಲಿ ಮೌಲ್ಯವರ್ಧನೆ ಮಾಡಿ, ಒಂದು ಉತ್ಪನ್ನವನ್ನೇ ತರಬೇಕೆಂದು ಸರ್ಕಾರ ಮತ್ತು ಕಾಫಿಬೋರ್ಡ್ ಜಂಟಿಯಾಗಿ ಪ್ರಯತ್ನ ನಡೆಸಿತು. ಸರ್ಕಾರದ ಅಧೀನದ ವಾಲ್ಮೀಕಿ ನಿಗಮವು ಉತ್ಪನ್ನದ ಬ್ರಾಂಡ್ ಮಾಡಲು ನೋಂದಣಿ ಮಾಡಿಸಿತು. ಮುಂದಿನ ವರ್ಷ ಮೌಲ್ಯವರ್ಧಿತ ಉತ್ಪನ್ನದಿಂದಾಗಿ 2.5 ಕೋಟಿ ರೂ. ವಹಿವಾಟು ನಡೆಸುವ ಉದ್ದೇಶ ಈ ಕಂಪನಿಯದ್ದಾಗಿದೆ.
ಎರಡು ವಿಶೇಷ
1. ಸಾವಯವ ಕಾಫಿ ಪುಡಿ ಜನರಿಗೆ ಸಿಗಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದು, ಅಷ್ಟೂ ಸೋಲಿಗರು ರಾಸಾಯನಿಕ ಬಳಸದೇ ಕಾಫಿ ಬೆಳೆಯಲು ಆರಂಭಿಸಿದ್ದಾರೆ. ಮುಂದಿನ ಎರಡು ವರ್ಷದಲ್ಲಿ ಸಾವಯವ ಪ್ರಮಾಣೀಕರಣ ವಾಗಲಿದ್ದು ನಂತರ ಸಾವಯವ ಕಾಫಿ ಪುಡಿ ಮಾರುಕಟ್ಟೆಯಲ್ಲಿ ಸಿಗಲಿದೆ.
2. ಗ್ರಾಹಕರು ತಮ್ಮ ಮನೆಯಲ್ಲಿ ಯಾವ ರೀತಿ ಉಪಕರಣ ಇಟ್ಟುಕೊಂಡಿದ್ದಾರೋ ಅದಕ್ಕೆ ತಕ್ಕಂತೆ ಕಾಫಿ ಪುಡಿಯನ್ನು ಆನ್‌ಲೈನ್‌ನಲ್ಲಿ ಆಯ್ಕೆ ಮಾಡಿಕೊಂಡರೆ ಅದನ್ನು ್ರೆಶ್ ಆಗಿ ಮಾಡಿ ಕಳಿಸುವ ಉದ್ದೇಶಹೊಂದಿದ್ದು, ಆನಿಟ್ಟಿನಲ್ಲಿ ಪ್ರಯತ್ನ ನಡೆದಿದೆ.